ಬೆಂಗಳೂರು: ಇಂದು ದೆಹಲಿಗೆ ಹೋಗಬೇಕೆಂದಿದ್ದೆ. ಆದರೆ, ಬಿಹಾರ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ವರಿಷ್ಠರು ನಿರತರಾಗಿದ್ದಾರೆ. ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎಂಬುದು ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಜಕ್ಕೂರಿನ ಶ್ರೀರಾಂಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರದಲ್ಲಿ ಹೈಕಮಾಂಡ್ ಹೇಳಿದಂತೆ ತೀರ್ಮಾನಿಸಲಾಗುತ್ತದೆ. ಇಂದು ದೆಹಲಿಗೆ ಹೊರಟಿದ್ದೆ. ಆದರೆ, ಹೈಕಮಾಂಡ್ ನಾಯಕರು ಬಿಹಾರ ಸರ್ಕಾರ ರಚನೆಯ ಬಿಸಿಯಲ್ಲಿದ್ದಾರೆ. ಅವರ ಅಪೇಕ್ಷೆ ಸರ್ಕಾರ ರಚನೆ ನಂತರ ಬನ್ನಿ ಎನ್ನುವುದು ಅನ್ನಿಸುತ್ತದೆ, ಅವರು ಕರೆದ ಕೂಡಲೇ ನಾನು ದೆಹಲಿಗೆ ತೆರಳಿ ಭೇಟಿ ಮಾಡುತ್ತೇನೆ.
ಹೈಕಮಾಂಡ್ ನಾಯಕರ ಜೊತೆ ಚರ್ಚೆ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು. ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಶಾಸಕರು ಸಭೆ ಸೇರಿದ್ದನ್ನು ಸಮರ್ಥನೆ ಮಾಡಿಕೊಂಡ ಸಿಎಂ ಬಿಎಸ್ವೈ, ಇವಾಗ ಸಭೆ ಸೇರದೆ, ಇನ್ನು ಯಾವಾಗ ಸಭೆ ಸೇರ್ತಾರೆ ಎಂದು ಹೇಳಿದರು.