ಬೆಂಗಳೂರು: ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ವಾಪಸ್ ಪಡೆದು ಜೆಡಿಎಸ್ಮುನ್ನಡೆಸುವಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಇಂದು ಹಿರಿಯ ನಾಯಕ ಹೆಚ್. ವಿಶ್ವನಾಥ್ ಅವರಿಗೆ ಹೇಳಿದ್ದಾರಂತೆ.
ಇಂದು ಸಂಜೆ ಪದ್ಮನಾಭನಗರದ ತಮ್ಮ ನಿವಾಸಕ್ಕೆ ವಿಶ್ವನಾಥ್ ಅವರನ್ನು ಕರೆಯಿಸಿಕೊಂಡ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ರಾಜೀನಾಮೆಯನ್ನು ಹಿಂಪಡೆಯಲಾರೆ ಎಂದ ವಿಶ್ವನಾಥ್ ಅವರಿಗೆ ಈ ಮಾತು ಹೇಳಿದ್ದಾರೆ. ದೇವೇಗೌಡರು ನೀಡಿದ ಈ ವಿವರದ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆ ನಿರ್ಧಾರವನ್ನು ವಿಶ್ವನಾಥ್ ಅವರು ಪುನರ್ ಪರಿಶೀಲಿಸ ತೊಡಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಲಕ್ಷಣಗಳು ಹೆಚ್ಚಿವೆ.
ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ನಿಮ್ಮನ್ನು ಬಿಟ್ಟು ಬೇರೆಯವರನ್ನು ತಂದು ಕೂರಿಸಲು ತಮಗೆ ಸಾಧ್ಯವಾಗುತ್ತಿಲ್ಲ. ಇವತ್ತಿನ ರಾಜಕೀಯ ಪರಿಸ್ಥಿತಿ ದಿನ ಕಳೆದಂತೆ ಸೂಕ್ಷ್ಮವಾಗುತ್ತಿದೆ. ಸದ್ಯದ ಪರಿಸ್ಥಿತಿ ನೋಡಿದರೆ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ಬಹುತೇಕ ಖಚಿತ. ಹೀಗಾಗಿ ಮುಂದಿನ ಚುನಾವಣೆಯನ್ನು ಎದುರಿಸಲು ನಾವು ಸಜ್ಜಾಗಬೇಕು. ಹಾಗೆಯೇ ಈ ಸಂದರ್ಭದಲ್ಲಿ ನಿಮ್ಮನ್ನು ಹೊರತುಪಡಿಸಿ ಆ ಜಾಗದಲ್ಲಿ ಯಾರನ್ನೂ ಕೂರಿಸಲೂ ಸಾಧ್ಯವಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗಿದೆ.
ಒಂದು ಹಂತದಲ್ಲಿ ವಿಶ್ವನಾಥ್ ಅವರು ಮಧ್ಯೆ ಪ್ರವೇಶಿಸಿ, ನಾನು ರಾಜೀನಾಮೆ ಹಿಂಪಡೆಯಲಾರೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮಧು ಬಂಗಾರಪ್ಪ ಅವರನ್ನು ಕೂರಿಸಿ. ಆ ಮೂಲಕ ಹಿಂದುಳಿದ ಸಮುದಾಯಕ್ಕೆ ಆದ್ಯತೆ ನೀಡಿದಂತೆಯೂ ಆಗುತ್ತದೆ ಎಂದು ಹೇಳಿದ್ದಾರೆ. ಆದರೆ, ಹೆಚ್. ವಿಶ್ವನಾಥ್ ಅವರ ಮಾತನ್ನು ಒಪ್ಪದ ದೇವೇಗೌಡರು, ನಿಮಗೆ (ವಿಶ್ವನಾಥ್ ) ಹಲವು ಕಾರಣಗಳಿಂದ ಬೇಸರವಾಗಿದೆ ಎಂಬುದು ನನಗೆ ಗೊತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೀವು ಹೇಳಿದ ಕ್ಯಾಂಡಿಡೇಟ್ಗೆ ಸಚಿವ ಸಾ ರಾ ಮಹೇಶ್ ಅವರು ಟಿಕೆಟ್ ನೀಡಲಿಲ್ಲ. ಅದು ನನಗೆ ಗೊತ್ತಿದೆ ಎಂದಾಗ ಸ್ಥಳದಲ್ಲೇ ಇದ್ದ ಸಾ ರಾ ಮಹೇಶ್ ಅವರು, ನಡೆದ ಘಟನೆಯನ್ನು ಮರೆತುಬಿಡಿ ಎಂದು ವಿಶ್ವನಾಥ್ ಅವರನ್ನು ಕೋರಿದರು ಎನ್ನಲಾಗಿದೆ.
ಈ ಮಧ್ಯೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಗಳು ನಿಕಟವಾಗಿರುವ ಕುರಿತು ದೇವೇಗೌಡರು ಸುಧೀರ್ಘವಾಗಿ ಮಾತನಾಡಿದರೆಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.