ಬೆಂಗಳೂರು: ಗದ್ದಲ ಆದ ಬಳಿಕ ಮೈಕ್ ಕಿತ್ತುಕೊಳ್ಳುವ ನಾಟಕ ಬೇಕಾಗಿಲ್ಲ ಎಂದು ಪರೋಕ್ಷವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಓವೈಸಿಗೆ ಟಾಂಗ್ ನೀಡಿದ್ದಾರೆ.
ಅಮೂಲ್ಯ ಎಂಬ ಯುವತಿ ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಪ್ರತಿಕ್ರಿಯೆ ನೀಡಿ, ಅಮೂಲ್ಯ ಲಿಯೋನಾ ವಿರುದ್ಧ ಈಗಾಗಲೇ ಉಪ್ಪಾರ ಪೇಟೆ ಪೊಲಿಸ್ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಆಕೆಯ ಹಿಂದೆ ಇನ್ನು ಯಾರಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ ಎಂದರು.
ದೇಶದ್ರೋಹದ ವರ್ತನೆಗಳನ್ನು ನಾವು ಸಹಿಸಲ್ಲ. ಕಾರ್ಯಕ್ರಮದ ಸಂಘಟಕರ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಇನ್ನು ಮುಂದೆ ಇಂತಹ ಪ್ರತಿಭಟನೆಗಳಿಗೆ ಅನುಮತಿ ನೀಡುವಾಗ ಷರತ್ತುಗಳನ್ನು ಹೆಚ್ಚಿಸಲಾಗುತ್ತದೆ. ವೇದಿಕೆಯಲ್ಲಿ ಇರುವವರ ಸಂಪೂರ್ಣ ಮಾಹಿತಿ ಪಡೆಯಲಾಗುತ್ತದೆ. ಹಾಗೆ ಪಶ್ಚಿಮ ವಿಭಾಗ ಡಿಸಿಪಿ ರಮೆಶ್ ಬಾನೊತ್ ತನಿಕೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.