ಬೆಂಗಳೂರು: ಜನತಾ ಕರ್ಫ್ಯೂ ವೇಳೆ ನಗರ ಪೊಲೀಸರ ಕಾರ್ಯವೈಖರಿ ಕುರಿತು ಕಮೀಷನರ್ ಕಚೇರಿಯಲ್ಲಿಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.
ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ದೇಶಾದ್ಯಂತ ಜನತಾ ಕರ್ಫ್ಯೂ ಎಂಬ ಆಂದೋಲನವನ್ನ ಪ್ರಧಾನಿ ಮೋದಿಯವರು ಘೋಷಣೆ ಮಾಡಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಈಗಾಗ್ಲೇ ಭಾನುವಾರ ಜನತಾ ಕರ್ಫ್ಯೂಗೆ ಬೆಂಬಲ ನೀಡಲು ಜನತೆ ಹಾಗೂ ಪೊಲೀಸರು ಮುಂದಾಗಿದ್ದಾರೆ.
ಸದ್ಯ ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿದ್ದು, ಪೊಲೀಸರು ಜನರ ಸೇವೆಗೆ ಇರುವವರು. ಎಲ್ಲಾ ಠಾಣೆಗಳಲ್ಲೂ ಪೊಲೀಸರು ಇರ್ತಾರೆ, ಅವಶ್ಯಕತೆ ಇದ್ದಾಗ ಮಾತ್ರ ಹೊರಗೆ ಬರ್ತಾರೆ. ಆದರೆ ಕಮಿಷನರ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲ್ಲ. ಅದರ ಬದಲಾಗಿ ಕಂಟ್ರೋಲ್ ರೂಂ ಮಾತ್ರ ಕೆಲಸ ಮಾಡುತ್ತೆ ಎಂದರು.
ಕೊರೊನಾ ತಡೆಗಟ್ಟುವ ಉದ್ದೇಶದಿಂದ ಪ್ರಧಾನಿಯವರು ಜನತಾ ಕರ್ಫ್ಯೂ ಮಾಡಲು ಮನವಿ ಮಾಡಿದ್ದಾರೆ. ಹಾಗಾಗಿ ಜನರೇ ಅರ್ಥ ಮಾಡಿಕೊಂಡು ಸ್ವಯಂ ಪ್ರೇರಿತವಾಗಿ ಕರ್ಫ್ಯೂಗೆ ಸ್ಪಂದಿಸಬೇಕಿದೆ. ಪ್ರಧಾನಿ ತುಂಬಾ ಚರ್ಚೆ ಮಾಡಿ ವೈರಸ್ ತಡೆಯಲು ಇಂತಹ ಕರ್ಫ್ಯೂಗೆ ಮನವಿ ಮಾಡಿರುವುದು. ಹಾಗಾಗಿ ತೀರಾ ಅವಶ್ಯವಿದ್ದರೆ ಮಾತ್ರ ಜನರು ಠಾಣೆಗೆ ಬರಲಿ. ಇಲ್ಲವೆಂದರೆ ಮನೆಯಲ್ಲೇ ಇರುವುದು ಉತ್ತಮ. ವಿನಾಕಾರಣ ಸುಮ್ಮನೆ ಕಂಪ್ಲೇಂಟ್ ಹೇಳಿಕೊಂಡು ಠಾಣೆಗೆ ಬರಬೇಡಿ. ಒಂದು ದಿನ ಕಂಟ್ರೋಲ್ ಮಾಡಿದರೆ ವೈರಸ್ ಹರಡುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ ಎಂದು ಭಾಸ್ಕರ್ ರಾವ್ ತಿಳಿಸಿದರು.