ಬೆಂಗಳೂರು : ಸಿಎನ್ಆರ್ ನಿಯಮ ಬದಲಿಗೆ ಒಂದು ಸಮಿತಿ ರಚಿಸಿ ಆರು ತಿಂಗಳ ಒಳಗಾಗಿ ವರದಿ ತೆಗೆದುಕೊಳ್ಳುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನೆಗೆ ಉತ್ತರಿಸಿ, ಸದಸ್ಯರು ಸಮಸ್ಯೆ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ಸರ್ಕಾರ ಸಿದ್ಧವಿದೆ. ಆ ನಿಟ್ಟಿನಲ್ಲಿ ಕ್ರಮಕೈಗೊಂಡು ಮಾಹಿತಿ ಒದಗಿಸುತ್ತೇವೆ ಎಂದರು.
ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಬೈರತಿ ಬಸವರಾಜ್, ಕುಶಾಲನಗರಕ್ಕೆ ಸಚಿವನಾದ ಬಳಿಕ ಎರಡು ಸಾರಿ ಭೇಟಿ ನೀಡಿದ್ದೇನೆ. ಅಲ್ಲಿನ ಸಮಸ್ಯೆಯ ಅರಿವಿದೆ. ಇಲ್ಲಿನ ಒಳಚರಂಡಿ ದುರಸ್ತಿ ಕಾಮಗಾರಿ ಶೀಘ್ರವಾಗಿ ಕೈಗೆತ್ತಿಕೊಳ್ಳುತ್ತೇವೆ. ಕುಶಾಲನಗರ ಹಾಗೂ ಕೊಡಗಿಗೆ ಇನ್ನೊಮ್ಮೆ ಭೇಟಿ ನೀಡಿ ಅಲ್ಲಿನ ಕಾಮಗಾರಿಯ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.
ವೀಣಾ ಅಚ್ಚಯ್ಯ ಮಾತನಾಡಿ, ಸಾಧ್ಯವಾದಷ್ಟು ಬೇಗ ಕಾಮಗಾರಿ ಆರಂಭಿಸಬೇಕು. ಇಲ್ಲಿ ಮಳೆಗಾಲ ಆರಂಭವಾದರೆ ಕಾಮಗಾರಿ ನಡೆಸಲು ಸಾಧ್ಯವಾಗಲ್ಲ. ಮಾಡಿದ ಕೆಲಸ ಕೆಡುತ್ತದೆ. ಆದ್ದರಿಂದ, ಬೇಗ ಕಾಮಗಾರಿ ಆರಂಭಿಸಿ ಎಂದು ಸಲಹೆ ನೀಡಿದರು.
ಕಾಮಗಾರಿ ರೂಪಿಸಿ ಕ್ರಮ ಕೈಗೊಳ್ಳುತ್ತೇವೆ
ಕಾಂಗ್ರೆಸ್ ಸದಸ್ಯ ಪಿ. ಆರ್ ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವ ಬೈರತಿ ಬಸವರಾಜ್, ಪ್ರತಿ ಹತ್ತು ವರ್ಷಕ್ಕೆ ಒಮ್ಮೆ ನಗರ ಯೋಜನೆಯ ಕಾರ್ಯಕ್ರಮ ರೂಪಿಸುತ್ತೇವೆ. ಅದು ಆಗದಿದ್ದಾಗ ಕಾಮಗಾರಿ ರೂಪಿಸಿ ಕ್ರಮಕೈಗೊಳ್ಳುತ್ತೇವೆ. ನನ್ನ ವ್ಯಾಪ್ತಿಯ ಕೆಲಸ ನಾನು ಮಾಡಬಲ್ಲೆ. ಆದರೆ, ಯೋಜನಾ ಆಯೋಗದ ವ್ಯಾಪ್ತಿಗೆ ಬರಲಿದೆ. ಅದರ ಕುರಿತು ಮಾಹಿತಿ ತರಿಸಿ ಸದಸ್ಯರಿಗೆ ನೀಡುತ್ತೇನೆ ಎಂದರು.
ಯಾವುದೇ ಯೋಜನೆ ಇಲ್ಲದೇ ಅಭಿವೃದ್ಧಿ ಪಡಿಸುತ್ತೇವೆ ಎನ್ನುವುದು ಅಪಾಯಕಾರಿ. ಯಾವುದೇ ವಿಜನ್ ಡಾಕ್ಯುಮೆಂಟ್ ಸರ್ಕಾರದ ಬಳಿ ಇಲ್ಲ. ಪ್ರಸ್ತಾವಕ್ಕೆ ಬರಲ್ಲ ಅನ್ನುತ್ತಾರೆ. ಜಿಲ್ಲಾ ಯೋಜನಾ ಸಮಿತಿ ಇಲ್ಲವೆಂದರೆ ಹೇಗೆ? ಕೇಂದ್ರ ಸರ್ಕಾರದ ಅನುದಾನವನ್ನು ಯಾವ ರೀತಿ ಬಳಸುತ್ತಾರೆ ಎನ್ನುವುದೇ ಅರಿವಾಗುತ್ತಿಲ್ಲ. ಸರ್ಕಾರ ಯಾವುದನ್ನೂ ಮಾಡಿಲ್ಲ. ರಾಜ್ಯದಲ್ಲಿ ಯೋಜನೆ ಇಲ್ಲದೇ ಹೇಗೆ ಅಭಿವೃದ್ಧಿ ಆಗಲಿದೆ ಎಂದು ಸದಸ್ಯ ಪಿ.ಆರ್. ರಮೇಶ್ ಅಭಿಪ್ರಾಯ ಪಟ್ಟರು.
ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಭೈರತಿ ಬಸವರಾಜ್, ಮಂಗಳೂರು ಭಾಗದ ಒಳಚರಂಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕಾಗಿ ಒಬ್ಬ ಮುಖ್ಯ ಎಂಜಿನಿಯರ್ ಅವರನ್ನು ನೇಮಿಸಿದ್ದೇನೆ. ಅಗತ್ಯ ಅನ್ನಿಸಿದರೆ ಅಧಿವೇಶನ ಸಂದರ್ಭ ಇಲ್ಲವೇ ನಂತರವಾದರೂ ಸದಸ್ಯರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ತ್ವರಿತ ಕಾಮಗಾರಿಗೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಓದಿ: 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ವೀಕ್ಷಣೆಗೆ ಆಹ್ವಾನ ವಿಚಾರ; ಪರಿಷತ್‌ನಲ್ಲಿ ಗದ್ದಲ, ಕಲಾಪಕ್ಕೆ ಅಡ್ಡಿ