ಬೆಂಗಳೂರು: ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯನ್ನು (ವಿಎಸ್‌ಎಲ್) ಮುಚ್ಚಲು ಅವಕಾಶ ಕೊಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದು ವಿಧಾನಸಭೆಗೆ ತಿಳಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕಾಂಗ್ರೆಸ್ ಸದಸ್ಯ ಸಂಗಮೇಶ್ ಅವರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೊದಲು ತಡೆಯಾಜ್ಞೆ ಕೊಡಬೇಕು. ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಸಂಸದ ರಾಘವೇಂದ್ರ ನೇತೃತ್ವದಲ್ಲಿ ಈಗಾಗಲೇ ಮನವಿ ನೀಡಲಾಗಿದೆ ಎಂದರು. ತಡೆಯಾಜ್ಞೆ ಕೊಟ್ಟರೆ ಜನರ ಆತಂಕ ದೂರವಾಗುತ್ತದೆ. ಈಗಾಗಲೇ ಕೇಂದ್ರಕ್ಕೂ ಸಹ ಪತ್ರ ಬರೆದಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಕೇಂದ್ರ ಕೊಟ್ಟಿದೆ ಎಂದು ತಿಳಿಸಿದರು.
ದಕ್ಷಿಣ ಭಾರತದ ಹಳೆಯ ಉಕ್ಕಿನ ಕಾರ್ಖಾನೆ: ದಕ್ಷಿಣ ಭಾರತದಲ್ಲಿರುವ ಹಳೆಯ ಉಕ್ಕಿನ ಕಾರ್ಖಾನೆ ಇದಾಗಿದ್ದು, ಉತ್ತಮ ಗುಣಮಟ್ಟದ ಉಕ್ಕು ತಯಾರಾಗುತ್ತಿತ್ತು. ಈ ಹಿಂದೆ ರಾಜ್ಯ ಸರ್ಕಾರ ತನಗೆ ನಡೆಸಲು ಆಗೋಲ್ಲ ಅಂತ ಖಾಸಗಿಗೆ ಕೊಟ್ಟಿದ್ದರು. ಖಾಸಗಿಯವರು ಕೂಡ ಸೇಲ್ಗೆ ಇಟ್ಟಿದ್ದಾರೆ. ನಾನು ಈಗಾಗಲೇ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಮೊದಲು ಸೇಲ್ ಮಾಡುವುದನ್ನು ತಪ್ಪಿಸಬೇಕು. ಕಾರ್ಖಾನೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಸದನಕ್ಕೆ ಸಿಎಂ ಭರವಸೆ ಕೊಟ್ಟರು.
ಇದಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪ ಪ್ರಸ್ತಾಪಿಸಿ, ವಿಎಸ್‌ಎಲ್ ಕಾರ್ಖಾನೆ ಇತಿಹಾಸ ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿಗಳು ಕೂಡಾ ಇಲ್ಲೇ ಇದ್ದಾರೆ. ಆ ಕಾರ್ಖಾನೆ ಉಳಿಸುವ ಕೆಲಸ ಮಾಡಬೇಕು. ನಮ್ಮೆಲ್ಲರ ಅಭಿಪ್ರಾಯ ಒಂದೇ ಎಂದು ತಿಳಿಸಿದರು. ಖಾಸಗಿಯವರು ನಡೆಸಲು ಆಗದಿದ್ರೆ ಸರ್ಕಾರಕ್ಕೆ ವಾಪಸ್ ಕೊಡಲಿ ಎಂದು ಕಾಂಗ್ರೆಸ್ ಶಾಸಕ ಸಂಗಮೇಶ್ ಒತ್ತಾಯಿಸಿದರು.
ತೌಡು ಕುಟ್ಟುವ ಕೆಲಸ ಹೇಳಿಕೆ ಪ್ರಸ್ತಾಪ: ಕಾಂಗ್ರೆಸ್-ಬಿಜೆಪಿ ಸದನದಲ್ಲಿ ತೌಡು ಕುಟ್ಟುವ ಕೆಲಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿರುವ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ನಮ್ಮ ಬಗ್ಗೆ ಮಾತನಾಡಿ ಅದು ರಾಜಕೀಯ. ಆದರೆ ತೌಡು ಕುಟ್ಟುವ ಕೆಲಸ ಎಂದು ಸಾರ್ವಜನಿಕವಾಗಿ ಹೇಳಿದರೆ ಹೇಗೆ?, ನಾನು ಸದನಕ್ಕೆ ಹೋಗಲ್ಲ ಎಂದು ಹೇಳಿದರೆ ಹೇಗೆ?. ತಾವು ಹಿರಿಯರು, ಮಾರ್ಗದರ್ಶಕರಾಗಬೇಕು. ರಾಜಕೀಯವಾಗಿ ಮಾತನಾಡಿ, ಆದರೆ ಸದನದ ಕಾರ್ಯಕಲಾಪಗಳ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ ಎಂದು ಹೇಳಿದರು.
ಇದಕ್ಕೆ ಸದನದಲ್ಲೇ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ನಾನು ತೌಡು ಕುಟ್ಟುವ ಕೆಲಸ ಆಗಿದೆ ಎಂದು ಎಲ್ಲೂ ಹೇಳಿಲ್ಲ. ಸದನದಲ್ಲಿ ನಿನ್ನೆ ಸಿದ್ದರಾಮಯ್ಯ ಮಾತನಾಡುವಾಗ ತೌಡು ಕುಟ್ಟುವ ಕೆಲಸ ಎಂದು ಚರ್ಚೆ ಆಗಿದೆ ಎಂದರು. ಬೆಳಗಾವಿ ಅಧಿವೇಶನಕ್ಕೆ ಪಕ್ಷದ ಕಾರ್ಯಕ್ರಮವಿದ್ದ ಕಾರಣ ಬರಲಿಲ್ಲ. ಆದರೆ ನಾನು ಈ ರೀತಿಯಲ್ಲಿ ಹೇಳಿಕೆ ಕೊಟ್ಟಿಲ್ಲ ಎಂದು ಹೆಚ್‌ಡಿಕೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಫೆ. 27ರಂದು ಪ್ರಧಾನಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ: ಬಿ.ವೈ.ರಾಘವೇಂದ್ರ