ಬೆಂಗಳೂರು: ಬೆಸ್ಕಾಂ ನೀಡುವ ಮಾಸಿಕ ವಿದ್ಯುತ್ ಬಿಲ್‌ನಲ್ಲಿ ನಮೂದಿಸಿರುವ ನಿಗದಿತ ಶುಲ್ಕ ಮತ್ತು ಇಂಧನ ಹೊಂದಾಣಿಕೆ ಶುಲ್ಕದ ಕುರಿತು ಸತ್ಯಕ್ಕೆ ದೂರವಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಹರಿಬಿಟ್ಟಿದ್ದಾರೆ. ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದೆ.
ಸಾರ್ವಜನಿಕರಲ್ಲಿ ಬೆಸ್ಕಾಂ ಮನವಿ: ಮಾಸಿಕ ಬಿಲ್‌ನಲ್ಲಿ ನಮೂದಿಸಲಾಗುವ ನಿಗದಿತ ಶುಲ್ಕವನ್ನು ಸಂಗ್ರಹಿಸಲು ಬೆಸ್ಕಾಂಗೆ ಯಾವುದೇ ಅಧಿಕಾರವಿಲ್ಲ. ಇಂಧನ ಹೊಂದಾಣಿಕೆ ಶುಲ್ಕ ವಿಧಿಸಿ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಪುಟ್ಟೇಗೌಡ ಎಂಬ ವ್ಯಕ್ತಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆಂದು ಬೆಸ್ಕಾಂ ಹೇಳಿದೆ. ಈ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇಂತಹ ಸುಳ್ಳು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.
ಫಿಕ್ಸೆಡ್ ಚಾರ್ಜಸ್ ಕಟ್ಟಲೇ ಬೇಕು: ಬಿಲ್‌ನಲ್ಲಿ ನಮೂದಿಸಿರುವ ನಿಗದಿತ ಶುಲ್ಕವು 1 ಕಿಲೋ ವ್ಯಾಟ್ಗೆ 100 ರೂ. ಇದ್ದು, 2 ಕಿಲೋ ವ್ಯಾಟ್ಗೆ 220 ರೂಪಾಯಿಯನ್ನು ಕೆಇಆರ್‌ಸಿ ನಿಗದಿ ಪಡಿಸಿರುತ್ತದೆ. ನಿಗದಿತ ಶುಲ್ಕವು ಗ್ರಾಹಕರು ಬಳಸುವ ವಿದ್ಯುತ್ ಬಳಕೆ ಮೇಲೆ ವಿಧಿಸುವ ಶುಲ್ಕ ಆಗಿರುವುದಿಲ್ಲ. ಗ್ರಾಹಕರು ವಿದ್ಯುತ್ ಬಳಸದಿದ್ದರೂ ನಿಗದಿತ ಶುಲ್ಕ (ಫಿಕ್ಸೆಡ್ ಚಾರ್ಜಸ್) ಕಟ್ಟಲೇ ಬೇಕಾಗಿರುತ್ತದೆ. ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಮತ್ತು ಅದನ್ನು ಪೂರೈಸಲು ಬೆಸ್ಕಾಂ ಒದಗಿಸುವ ಮೂಲಸೌಕರ್ಯದ ನಿರ್ವಹಣಾ ವೆಚ್ಚಕ್ಕಾಗಿ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ಕೆಇಆರ್‌ಸಿ ಪರಿಷ್ಕರಣೆ: ಇಂಧನ ಹೊಂದಾಣಿಕೆ ಶುಲ್ಕವನ್ನು ಕಲ್ಲಿದ್ದಲು ಖರೀದಿ ವೆಚ್ಚದ ಆಧಾರದ ಮೇಲೆ ಕೆಇಆರ್‌ಸಿ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ ಎಂದು ಬೆಸ್ಕಾಂ ಎಂಡಿ ಸಷ್ಟಪಡಿಸಿದ್ದಾರೆ.
ಹೆವಿ ಲೋಡ್ ದಂಡ: ಗ್ರಾಹಕರು ತಾವು ಪಡೆದ ವಿದ್ಯುತ್ ಪ್ರಮಾಣದ ಸಾಮರ್ಥ್ಯಕ್ಕಿಂತ (ಉದಾಹರಣೆಗೆ 3 ಕಿ.ವ್ಯಾಟ್), ಹೆಚ್ಚಿನ ವಿದ್ಯುತ್ ಬಳಸಿದ್ದಾಗ ಮಾತ್ರ ಹೆವಿ ಲೋಡ್ ದಂಡವನ್ನು ಬಿಲ್‌ನಲ್ಲಿ ನಮೂದಿಸಿರುವ ಪೆನಾಲ್ಟಿ ವಿಭಾಗದಲ್ಲಿ ನಮೂದಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದ್ದಾರೆ.
ವಿದ್ಯುತ್ ಬಿಲ್ ಬಡ್ಡಿ: ನಿಗದಿತ ಅವಧಿಯೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಬಿಲ್‌ನಲ್ಲಿ ನಮೂದಿಸಿರುವ ಬಡ್ಡಿ ವಿಭಾಗದಲ್ಲಿ ದಂಡದ ಮೊತ್ತವನ್ನು ನಮೂದಿಸಲಾಗುತ್ತದೆ. ಹಾಗೆಯೇ ಬಿಲ್‌ನಲ್ಲಿ ಉಲ್ಲೇಖಿಸಿರುವ ತೆರಿಗೆಯನ್ನು ರಾಜ್ಯ ಸರಕಾರದ ಪರವಾಗಿ ಬೆಸ್ಕಾಂ ಸಂಗ್ರಹಿಸುತ್ತಿದೆ. ತೆರಿಗೆ ದರವನ್ನು ಕೆಇಆರ್‌ಸಿ ಪರಿಷ್ಕರಿಸುತ್ತದೆ. ವಾಸ್ತವವನ್ನು ಮರೆಮಾಚಿ, ವಿದ್ಯುತ್ ಬಿಲ್ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯದೇ ಜನರನ್ನು ದಾರಿ ತಪ್ಪಿಸುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ರವಾನೆ: ವಿದ್ಯುತ್ ಬಿಲ್ ಪಾವತಿಸಲು 6 ತಿಂಗಳ ಕಾಲಾವಕಾಶ ಇರುತ್ತದೆ. ಅಲ್ಲಿಯ ತನಕ ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಕೆಇಬಿಗೆ ಅಧಿಕಾರವಿರುವುದಿಲ್ಲ ಎಂಬ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಾಲ್ಕು ತಿಂಗಳ ಹಿಂದೆ ಇದೇ ವ್ಯಕ್ತಿ ಪ್ರಚಾರ ಮಾಡಿದ್ದ. ಇತನ ನಡವಳಿಕೆ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಎಚ್ಚರಿಸಿದ್ದರು. ಈತ ಅದೇ ತಪ್ಪನ್ನು ಮತ್ತೆ ಪುನರಾರ್ವತನೆ ಮಾಡುತ್ತಿದ್ದಾನೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ಓದಿ: ವಿದ್ಯುತ್ ಸ್ಪರ್ಶಿಸಿ ಯುವತಿ ಮೃತಪಟ್ಟಿದ್ದಕ್ಕೆ ನಾವು ಜವಾಬ್ದಾರರಲ್ಲ: ಬೆಸ್ಕಾಂ ವರದಿ