ಯಲಹಂಕ(ಬೆಂಗಳೂರು): ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಠಾಣೆಗೆ ಬಂದ ವಕೀಲರನ್ನು ಲಾಕಪ್ನಲ್ಲಿ ಇರಿಸಿದ ಆರೋಪ ಸಂಬಂಧ ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಆದೇಶ ನೀಡಿದ್ದಾರೆ. ಕಾನ್ಸ್‌ಟೇಬಲ್ ಕಿರಣ್ ಹಾಗೂ ಮೋಹನ್ ಕುಮಾರ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.
ಪ್ರಕರಣದ ವಿವರ: ಯಲಹಂಕ ತಾಲೂಕಿನ ಶಾನುಬೋಗನ ಹಳ್ಳಿ ಜಾಗದ ವಿಚಾರ ಸಂಬಂಧ ಪ್ರಕರಣ ದಾಖಲಾಗಿತ್ತು. ಜಾಗದ ವಿಚಾರವಾಗಿ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಮಾರುತಿ ಎಂಬುವರು ಇಬ್ಬರ ವಿರುದ್ಧ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಾದ ಮಂಜುನಾಥ್ ಮತ್ತು ಚಂದ್ರಶೇಖರ್ ಎಂಬುವವರು ರಾಜಾನುಕುಂಟೆ ಠಾಣೆಗೆ ಬಂದಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಚೇಂಬರ್ನಲ್ಲಿ ಇವರಿಬ್ಬರು (ಮಂಜುನಾಥ್ ಮತ್ತು ಚಂದ್ರಶೇಖರ್) ಜೋರಾಗಿ ಕೂಗಾಡಿದ್ದಾರೆ. ಆಗ ಇಬ್ಬರನ್ನು ತಡೆದ ಪೊಲೀಸರು ಲಾಕಪ್ಗೆ ಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಂಜುನಾಥ್ ನಾನು ಅಡ್ವೊಕೇಟ್ ಎಂದು ಕೂಗಿದ್ದಾರೆ. ಅಲ್ಲದೇ ಲಾಕಪ್ ಒಳಗೆ ವಿಡಿಯೋ ಮಾಡಿದ್ದಾರೆ. ಬಳಿಕ ತಮ್ಮ ಮೊಬೈಲ್ನಲ್ಲಿ ಸೆರೆಯಾಗಿದ್ದ ವಿಡಿಯೋವನ್ನು ಮಂಜುನಾಥ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಪಡೆದ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ 'ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗದೆ ಲಾಕಪ್ಗೆ ಹಾಕಿದ ಆರೋಪ'ದಡಿ ಇಬ್ಬರು ಕಾನ್ಸ್ಟೇಬಲ್ಸ್ಅನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ನಾಲ್ವರು ಪೊಲೀಸರ ಅಮಾನತು: ಸೈಬರ್ ಅಪರಾಧ ಪ್ರಕರಣವೊಂದರ ಶಂಕಿತ ಆರೋಪಿಗಳಿಂದ 3.90 ಲಕ್ಷ ರೂ. ಹಣ ಲಂಚ ಪಡೆದ ಆರೋಪದ ಮೇಲೆ ಕೇರಳ ಪೊಲೀಸರಿಂದ ವಿಚಾರಣೆಗೊಳಗಾಗಿದ್ದ ನಗರದ ವೈಟ್ ಫೀಲ್ಡ್ ಸಿಇಎನ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಇತ್ತೀಚೆಗೆ ಆದೇಶ ನೀಡಲಾಗಿತ್ತು. ಇನ್ಸ್ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ಟೇಬಲ್ಗಳಾದ ಶಿವಣ್ಣ, ವಿಜಯ್ ಕುಮಾರ್ ಹಾಗೂ ಕಾನ್ಸ್‌ಟೇಬಲ್ ಸಂದೇಶ್ ಅಮಾನತುಗೊಂಡವರು.
ಇದನ್ನೂ ಓದಿ: ಆರೋಪಿ ಬಳಿ ಹಣಕ್ಕೆ ಬೇಡಿಕೆ ಪ್ರಕರಣ: ಬೆಂಗಳೂರಿನ ನಾಲ್ವರು ಪೊಲೀಸರ ಅಮಾನತು
ಮಾರಾಮಾರಿ ಪ್ರಕರಣ-ಇಬ್ಬರು ಸಿಬ್ಬಂದಿ ಅಮಾನತು: ಇತ್ತೀಚೆಗೆ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಬ್ಬರು ಹೊಡೆದಾಡಿಕೊಂಡ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿತ್ತು. ಉತ್ತರ ವಲಯದ ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ.ಶೇಷ ಆದೇಶ ಹೊರಡಿಸಿದ್ದರು. ಹಿರಿಯ ವೀಕ್ಷಕ ಬಿ.ಎಲ್.ಮೆಳವಂಕಿ, ವೀಕ್ಷಕ ವಿ.ಟಿ.ವಾಘಮೋರೆ ಅಮಾನತುಗೊಂಡವರು. ಇಬ್ಬರು ಕೈದಿಗಳ ಮಧ್ಯೆ ಗಲಾಟೆ ನಡೆಯದಂತೆ ನೋಡಿಕೊಳ್ಳುವಲ್ಲಿ ಸಿಬ್ಬಂದಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಹಾಗಾಗಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ: ಹಿಂಡಲಗಾ ಕೈದಿಗಳ ಮಾರಾಮಾರಿ ಪ್ರಕರಣ: ಇಬ್ಬರು ಸಿಬ್ಬಂದಿ ಅಮಾನತು