ಬೆಂಗಳೂರು : ಡಿಜೆಹಳ್ಳಿ ಮತ್ತು ಕೆಜೆಹಳ್ಳಿ ಗಲಭೆ ಪ್ರಕರಣದ ಆರೋಪಿಯಾಗಿರುವ ಪುಲಕೇಶಿನಗರದ ಮಾಜಿ ಕಾರ್ಪೊರೇಟರ್ ಜಾಕೀರ್ ಹುಸೇನ್ ಪೊಲೀಸರಿಗೆ ದೊಡ್ಡ ತಲೆ ನೋವಾಗಿದ್ದಾನೆ. ಕಳೆದ ಒಂದೂವರೆ ತಿಂಗಳಿಂದ ನಾಪತ್ತೆಯಾಗಿರುವ ಜಾಕಿರ್, ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ ಎಂಬ ಮಾಹಿತಿ ಇಲ್ಲ.
ಹೀಗಾಗಿ, ಈತನಿಗಾಗಿ ಮೈಸೂರು, ಮಂಗಳೂರು, ಕೇರಳ ಬಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೂ ಜಾಕೀರ್ ಪತ್ತೆಯಾಗಿಲ್ಲ. ಸಿಸಿಬಿ ಪ್ರಾಥಮಿಕವಾಗಿ ನೋಟಿಸ್ ನೀಡಿದ್ದ ವೇಳೆ ವಿಚಾರಣೆಗೆ ಜಾಕೀರ್ ಹಾಜರಾಗಿದ್ದ. ಎರಡನೇ ಬಾರಿ ನೋಟಿಸ್ ನೀಡಿ ವಿಚಾರಣೆಗೆ ಬುಲಾವ್ ನೀಡಿದಾಗ, ಬಂಧನದ ಭೀತಿಯಿಂದ ನಾಪತ್ತೆಯಾಗಿದ್ದ.
ಸದ್ಯ, ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ಕಾಲ್ ರೆಕಾರ್ಡ್ಸ್ ಹಾಗೂ ಆಪ್ತರ ಮಾಹಿತಿ ಆಧರಿಸಿ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಜಾಕೀರ್ ಹುಸೇನ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನದ ಆಕಾಂಕ್ಷಿಯಾಗಿದ್ದ.
ಹೀಗಾಗಿ, ಮಾಜಿ ಮೇಯರ್ ಸಂಪತ್ ರಾಜ್ ಜೊತೆಗೂಡಿ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ ಕೂಗಳತೆ ದೂರದಲ್ಲಿ ಕೂತು ಸ್ಕೆಚ್ ರೆಡಿ ಮಾಡಿ, ತನ್ನ ಸಹಚರರ ಜೊತೆಗೂಡಿ ಗಲಭೆ ಸೃಷ್ಟಿಸಿದ್ದ ಎಂದು ಆರೋಪಿಸಲಾಗಿದೆ. ಇದಕ್ಕೆ ಬೇಕಾದ ಕಾಲ್ ಡಿಟೇಲ್ಸ್ ಹಾಗೂ ಇತರ ಕೆಲ ಸಾಕ್ಷ್ಯಗಳು ಕೂಡ ಸಿಸಿಬಿಗೆ ಸಿಕ್ಕಿದೆ ಎನ್ನಲಾಗ್ತಿದೆ. ಈ ಆಧಾರದ ಮೇರೆಗೆ ತನಿಖೆ ಮುಂದುವರೆಸಿ ಜಾಕೀರ್ನನ್ನು ಖೆಡ್ಡಾಗೆ ಕೆಡವಲು ಸಿಸಿಬಿ ಮುಂದಾಗಿದೆ.