ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸದ್ಯಕ್ಕೆ ಪೊಲೀಸರು 80 ಮಂದಿಯನ್ನು ಬಳ್ಳಾರಿ ಜೈಲಿಗೆ, ಇನ್ನುಳಿದ 226 ಮಂದಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಈ ಬಂಧಿತ ಆರೋಪಿಗಳ ಪೈಕಿ ಐವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪರಪ್ಪನ ಅಗ್ರಹಾರದ ಅಧಿಕಾರಿಗಳು ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಜೈಲಿನ ನೂತನ ಕಟ್ಟಡದಲ್ಲಿ ಇರಿಸಿದ್ದಾರೆ. ಜೊತೆಗೆ ಆರೋಪಿಗಳನ್ನು ಯಾರೂ ಭೇಟಿಯಾಗುವಂತಿಲ್ಲ ಎಂದು ನಿಷೇಧ ವಿಧಿಸಿದ್ದಾರೆ.
ಆದರೆ ಸದ್ಯ ಡಿ.ಜೆ.ಹಳ್ಳಿ ಆರೋಪಿಗಳು ಜೈಲಿನಲ್ಲಿರುವ ಕಾರಣ ಮತ್ತಷ್ಟು ಭದ್ರತೆ ಹೆಚ್ವಿಸಲಾಗಿದೆ. 14 ದಿನ ಕೊರೊನಾ ಲಕ್ಷಣ ಇಲ್ಲದಿದ್ದರೆ ಹಳೇ ಕಟ್ಟಡಕ್ಕೆ ಶಿಫ್ಟ್ ಮಾಡಲಿದ್ದಾರೆ. ಬಂಧಿತರ ಪೈಕಿ 27 ಮಂದಿಗೆ ಪೊಲೀಸರು ಫುಲ್ ಡ್ರಿಲ್ ಮಾಡ್ತಿದ್ದಾರೆ. ಇವರ ಕುಮ್ಮಕ್ಕಿನಿಂದ ಉಳಿದ ಆರೋಪಿಗಳು ಪ್ರಚೋದನೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.
ಪೋಸ್ಟ್ ಹಾಕಿದ ನವೀನ್ಗೆ ಪ್ರತ್ಯೇಕ ವ್ಯವಸ್ಥೆ:
ಗಲಭೆಗೂ ಮುಂಚೆ ಪೋಸ್ಟ್ ಹಾಕಿದ ನವೀನ್ನನ್ನು ಸದ್ಯ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಈತನಿಗೆ ಜೈಲಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಯಾಕಂದ್ರೆ ನವೀನ್ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆ ಅಧಿಕಾರಿಗಳು ಅವನನ್ನು ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ಆತನ ಮೇಲೆ ಕಣ್ಣಿಟ್ಟಿದ್ದಾರೆ.