ಬೆಂಗಳೂರು: ಹೆಂಡತಿ ಜೊತೆ ಟ್ರಿಪ್ ಹೋಗಲು ನಗರದಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಐನಾತಿ ಕಳ್ಳ ಕೊನೆಗೂ ಅಂದರ್ ಆಗಿದ್ದಾನೆ. ಈ ಐನಾತಿ ಕಳ್ಳನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರ ನಿವಾಸಿ ಇಮ್ರಾನ್ ಪಾಷಾ (26) ಬಂಧಿತ ಆರೋಪಿ. ಮನೆಗಳ್ಳತನದ ದೂರು ಬಂದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಖದೀಮ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈತ ನಟೋರಿಯಸ್ ಕಳ್ಳನಾಗಿದ್ದು, ಮನೆ ಬಾಗಿಲನ್ನ ರಾಡ್ನಿಂದ ಮೀಟಿ ಮನೆಗಳ್ಳತನ ಮಾಡುತ್ತಿದ್ದ. ಆರೋಪಿಯಿಂದ 8 ಲಕ್ಷ 60 ಸಾವಿರ ಮೌಲ್ಯದ 147 ಗ್ರಾಂ ಚಿನ್ನಾಭರಣ ಮತ್ತು 1 ಕೆ.ಜಿ 517 ಗ್ರಾಂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಹೆಂಡತಿ ಎಂದರೇ ಬಲು ಪ್ರೀತಿ. ಹಾಗಾಗಿ ಇಮ್ರಾನ್ ಪಾಷಾ ಕಳ್ಳತನ ಮಾಡಿ, ಪತ್ನಿಯನ್ನ ಖುಷಿಯಿಂದ ಸಾಕುತ್ತಿದ್ದ. ಅಷ್ಟೇ ಅಲ್ಲ ಕಳ್ಳತನ ಮಾಡಿಯೇ ಪತ್ನಿಯನ್ನ ಕಾಶ್ಮೀರಕ್ಕೂ ಕರೆದೊಯ್ದಿದ್ದ.
ಇದನ್ನೂ ಓದಿ: ಬಸ್ ಡೋರ್, ಮೇಲ್ಭಾಗದಲ್ಲಿ ಕುಳಿತು ಅಪಾಯಕಾರಿ ಪ್ರಯಾಣ: ವಿಡಿಯೋ
ಈತ ಈ ಹಿಂದೆ ಮಹದೇವಪುರ, ಅಶೋಕ್ ನಗರ, ಕೆ.ಆರ್. ಪುರಂ, ಮಾರತ್ ಹಳ್ಳಿ ಸೇರಿ ಒಟ್ಟು ಐದಾರು ಪೊಲೀಸ್ ಸ್ಟೇಷನ್ಗಳ ವ್ಯಾಪ್ತಿಯಲ್ಲಿ ಆರು ಬಾರಿ ಕಳ್ಳತನ ಮಾಡಿದ್ದಾನೆ. ಮೇಲ್ನೋಟಕ್ಕೆ ಈತ ಗುಜರಿ ಕೆಲಸ ಮಾಡಿದ್ರೆ, ಮುಖ್ಯ ಕೆಲಸವನ್ನಾಗಿ ಕಳ್ಳತನವನ್ನೇ ಆರಿಸಿಕೊಂಡಿದ್ದ. ಅಷ್ಟೇ ಅಲ್ಲ, ಪೊಲೀಸರು ಈತನನ್ನು ಹುಡುಕಿಕೊಂಡು ಬಂದೇ ಬರ್ತಾರೆ ಎಂಬ ಕಾರಣಕ್ಕೆ ಗುಬ್ಬಚ್ಚಿ ಗೂಡಿನಂತಿರುವ ತನ್ನ ಮನೆಯ ಒಳಗೆ ಕಿಂಡಿಗಳನ್ನ ಸಹ ಮಾಡಿಕೊಂಡಿದ್ದ. ಇದರಿಂದ ಪೊಲೀಸರು ಮನೆಗೆ ನುಗ್ಗಿದರೆ ಸುಲಭವಾಗಿ ಎಸ್ಕೇಪ್ ಆಗಬಹುದೆಂಬುದು ಈತನ ಪ್ಲಾನ್ ಆಗಿತ್ತು. ಈತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.