ಬೆಂಗಳೂರು: 'ಸ್ಟೋನ್ ಮ್ಯಾನ್ ಮರ್ಡರ್' ಎಂಬ ಸಿನೆಮಾ ನೋಡಿರಬಹುದು. ಈಗ ಬೆಂಗಳೂರಲ್ಲೂ ಕೂಡ ಚಿತ್ರದ ಕಥೆಯೊಂದಿಗೆ ಸಾಮ್ಯತೆ ಹೊಂದಿರುವ ಘಟನೆ ನಡೆದಿದೆ. ಸೈಕೋ ಮಾದರಿಯಲ್ಲಿ ಹತ್ಯೆ ನಡೆಸಿ, ಸ್ಥಳದಿಂದ ಕಾಲ್ಕಿತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಯು ಮಿಸುಕಾಡದ ರೀತಿಯಲ್ಲಿ ಕೊಂದು ಪರಾರಿಯಾದವನಿಗೆ ಪೊಲೀಸರು ಹಗಲಿರುಳು ಹುಡುಕಾಟ ನಡೆಸಿದ್ದರು.
ಮಾರ್ಚ್ 15ರ ತಡರಾತ್ರಿ ರಾಜಗೋಪಾಲನಗರದ ಮೊಬೈಲ್ ಅಂಗಡಿಯೊಂದರ ಮುಂದೆ ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ಕೃಷ್ಣಪ್ಪ ಎಂಬುವರ ಹತ್ಯೆ ನಡೆದಿತ್ತು. ಸಿಸಿಟಿವಿಯಲ್ಲಿ ದಾಖಲಾದ ದೃಶ್ಯದಲ್ಲಿ ರಕ್ತ ಹರಿಯದಿದ್ದರೂ, ಹತ್ಯೆಯು ಭಯ, ಭೀಕರತೆ ಸೃಷ್ಟಿಸಿತ್ತು. ಕೊಲೆ ಆರೋಪಿಯನ್ನು ನಿರಂತರವಾಗಿ ಹುಡುಕಿದ ಪೊಲೀಸರು, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಕೋ ಕಿಲ್ಲರ್ ಪ್ರಶಾಂತ್ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ.
500 ರೂಪಾಯಿಗಾಗಿ ಪ್ರಾಣ ತೆಗೆದ ಹಂತಕ: ಅಂಗಡಿಯ ಮುಂದೆ ಮಲಗಿದ್ದ ಕೃಷ್ಣಪ್ಪ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹಂತಕ, ಅವರ ಬಳಿ ಇದ್ದ 500 ರೂಪಾಯಿಯನ್ನ ದೋಚಿಕೊಂಡು ಪರಾರಿಯಾಗಿದ್ದ. ಘಟನೆ ಕುರಿತಂತೆ ತನಿಖೆಗಿಳಿದ ಪೊಲೀಸರು ಮೊಬೈಲ್ ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ ಹತ್ಯೆಯ ಭೀಕರತೆ ಕಂಡು ಬಂದಿತ್ತು. ಕೇವಲ 30-40 ಸೆಕೆಂಡುಗಳಲ್ಲೇ ಕೊಲೆ ನಡೆದಿದ್ದು, ಆದರೆ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ಸಿಸಿಟಿವಿ ದೃಶ್ಯ ಚೆಕ್ ಮಾಡಿದ್ದರು.
ಹತ್ಯೆಗಾಗಿ ಹೊಂಚು ಹಾಕಿದ್ದ ಹಂತಕ: ಹಂತಕ ಹತ್ಯೆ ನಡೆಸಲು ಅದೇ ಜಾಗದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದ. ಹೀಗೆ ಕುಳಿತಿರಲು ಕಾರಣ ಸೊಳ್ಳೆ ಕಾಟ. ಹೌದು, ಫುಟ್ಪಾತ್ ಮೇಲೆ ಮಲಗಿದ್ದ ಕೃಷ್ಣಪ್ಪನಿಗೆ ಸೊಳ್ಳೆ ಕಚ್ಚುತ್ತಿದ್ದವು. ಹೀಗಾಗಿ ಪದೇ ಪದೆ ಹೊರಳಾಡುತ್ತಿದ್ದ, ಹೀಗಾಗಿ ಆರೋಪಿಗೆ ಆತನ ಪಕ್ಕ ಹೋಗಲೂ ಸಾಧ್ಯವಾಗ್ತಿರಲಿಲ್ಲ. ಎಲ್ಲಿ ಕೃಷ್ಣಪ್ಪ ಎದ್ದು ಬಿಡುತ್ತಾನೋ ಎಂಬ ಭಯದಿಂದ ಗಾಢ ನಿದ್ರೆಗೆ ಜಾರುವವರೆಗೆ ಅಲ್ಲೇ ಇದ್ದು ಕಾದು ಕೂತಿದ್ದ.
ಕಲ್ಲು ಎತ್ತಿಹಾಕಿ ಹತ್ಯೆ: ಯಾವಾಗ ಹಂತಕನ ತಾಳ್ಮೆ ಕೆಟ್ಟಿತೋ, ತಕ್ಷಣ ಅಲ್ಲೆ ಇದ್ದ ಕಲ್ಲು ಎತ್ತಿಕೊಂಡು ಎರಡೇ ಏಟಿಗೆ ಕೃಷ್ಣಪ್ಪನನ್ನ ಮುಗಿಸಿದ್ದ. ಪರಿಣಾಮ ಕೃಷ್ಣಪ್ಪ ಏಟಿನ ತೀವ್ರತೆಗೆ ಮಿಸುಕಾಡದೇ ಸಾವನ್ನಪ್ಪಿದ್ದ. ನಂತರ ಕಲ್ಲನ್ನು ಅಲ್ಲೇ ಬಿಸಾಕಿ, ಕೃಷ್ಣಪ್ಪನ ಜೇಬಿನಲ್ಲಿದ್ದ 500 ರೂ. ಎತ್ತಿಕೊಂಡು ರಾಜಗೋಪಾಲನಗರದಿಂದ ಕೆ.ಆರ್. ಮಾರುಕಟ್ಟೆಗೆ ಸುಮಾರು 10 ಕಿಲೋಮೀಟರ್ ದೂರವನ್ನು ನಡೆದುಕೊಂಡೇ ತಲುಪಿದ್ದ.
ಅಲ್ಲಿಂದ ಬಳಿಕ ಆರೋಪಿ ಪ್ರಶಾಂತ್ ನೇರವಾಗಿ ತನ್ನೂರು ಕುಣಿಗಲ್ಗೆ ತೆರಳಿದ್ದ. ಬಸ್ಗಳಲ್ಲಿ ಕೆಲಸ ಮಾಡಿಕೊಂಡಿದ್ದವನಿಗೆ ಪತ್ನಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಸದ್ಯ ಆರೋಪಿಯನ್ನ ಬಂಧಿಸಿರುವ ರಾಜಗೋಪಾಲನಗರ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ವಿಷಪೂರಿತ ಆಹಾರ ಸೇವಿಸಿ ಮಕ್ಕಳು ಸೇರಿದಂತೆ 40ಕ್ಕೂ ಮಂದಿ ಅಸ್ವಸ್ಥ!