ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ರಸ್ತೆ ಮುಂಬರುವ ದಸರಾ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಅಂದಾಜು 8000 ಕೋಟಿ ರೂ. ವೆಚ್ಚದ ಯೋಜನೆ ಕಾಮಗಾರಿ ಭರದಿಂದ ಸಾಗಿದೆ.
ಹೆಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದ ಕಾಲದಲ್ಲಿ ಸುಮಾರು 117 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಈ ಯೋಜನೆ ಕೇಂದ್ರದಿಂದ ಮಂಜೂರಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕೆಲಕಾಲ ಯೋಜನೆಯ ಕಾಮಗಾರಿ ವಿಳಂಬವಾದರೂ ರಾಜ್ಯ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಕಾಮಗಾರಿ ಕಾರ್ಯ ಚುರುಕುಗತಿಯಿಂದ ನಡೆಯುತ್ತಿದ್ದು, ದಸರಾ ಮಹೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು-ಮೈಸೂರು ನಡುವಣ ಬಹುತೇಕ ನಗರಗಳನ್ನು ಪ್ರವೇಶಿಸದೆ ಕೇವಲ ಒಂದೂವರೆ ಗಂಟೆಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸಬಹುದು. ಬೆಂಗಳೂರಿನಿಂದ ಪ್ರಯಾಣಿಸುವವರು ಬಿಡದಿ, ರಾಮನಗರ, ಚನ್ನಪಟ್ಟಣವನ್ನು ಪ್ರವೇಶಿಸದೆ ಮದ್ದೂರು, ಮಂಡ್ಯ ನಗರಗಳನ್ನು ಮೇಲ್ಸೇತುವೆ ಮೂಲಕ ದಾಟಿ ಹೋಗಬಹುದು.
ಒಂದೂವರೆ ಗಂಟೆಯಲ್ಲಿ ಉಭಯ ನಗರಗಳನ್ನು ಸಂಪರ್ಕಿಸಲು ಸಾಧ್ಯವಾಗುವ ಈ ದಶಪಥ ರಸ್ತೆಯಲ್ಲಿ ನಿರ್ದಿಷ್ಟ ಪ್ರಮಾಣದ ಆರ್ಥಿಕ ಚಟುವಟಿಕೆಗಳು ಮಾತ್ರ ಸಾಧ್ಯವಾಗಲಿದೆ. ಯೋಜನೆಯ ಕಾಮಗಾರಿಗೆ ಶುರುವಿನಲ್ಲಿ ಭೂ ಸ್ವಾಧೀನ ಕಾರ್ಯ ತೊಡಕಾಗಿ ಪರಿಣಮಿಸಿತ್ತು. ಇದೇ ಕಾರಣಕ್ಕಾಗಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಇದೀಗ ಯೋಜನೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 27,156 ಕೋವಿಡ್ ಕೇಸ್, 14 ಸಾವು.. ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?