ಬೆಂಗಳೂರು: ರಾಜ್ಯದಲ್ಲಿ ದಿನಕಳೆದಂತೆ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸಿಟಿ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14ರಿಂದ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಿ ಆದೇಶ ಹೊರಹಾಕಿದೆ.
ಸಿಲಿಕಾನ್ ಸಿಟಿಯಲ್ಲಿ ಪ್ರತಿದಿನ ಸಾವಿರಾರು ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಮುಖ್ಯಮಂತ್ರಿ ಬಿಎಸ್ವೈ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆ ಬಂದ್ ಆಗಲಿವೆ.
ಏನೆಲ್ಲ ಲಭ್ಯ, ಏನೆಲ್ಲ ಬಂದ್!?
ಆಸ್ಪತ್ರೆ, ದಿನಸಿ, ಹಾಲು, ಹಣ್ಣು, ತರಕಾರಿ,ದಿನಬಳಕೆಯ ಅಗತ್ಯ ವಸ್ತುಗಳು ಸೇರಿದಂತೆ ಮಹತ್ವದ ಸೇವೆ ಲಭ್ಯವಾಗಲಿವೆ. ಜತೆಗೆ ಈಗಾಗಲೇ ಘೋಷಣೆಯಾಗಿರುವ ಸ್ನಾತಕೋತ್ತರ ಪರೀಕ್ಷೆ ನಡೆಯಲಿವೆ.
ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಉಳಿದಂತೆ ಬಸ್, ಆಟೋ,ಕ್ಯಾಬ್ ಅಗತ್ಯ ಸೇವೆ ಸಮಯದಲ್ಲಿ ಲಭ್ಯವಾಗಲಿವೆ. ಇನ್ನು ಹೋಟೆಲ್, ರೆಸ್ಟೋರೆಂಟ್, ಮದ್ಯದಂಗಡಿ,ಮಾಲ್ಗಳು ಸಂಪೂರ್ಣವಾಗಿ ಬಂದ್ ಆಗಲಿದ್ದು, ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಅಧಿಕೃತವಾಗಿ ಹೊರ ಬೀಳಬೇಕಾಗಿದೆ.
ಮಂಗಳವಾರ ರಾತ್ರಿ 8.00 ಗಂಟೆಯಿಂದ 1 ವಾರಗಳ ಕಾಲ ಅಂದರೆ 23.07.2020 ರ ಬೆಳಗ್ಗೆ 5.00 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ.