ಬೆಂಗಳೂರು: ಮಷಿನ್ಗೆ ಕಾರ್ಡ್ ಹಾಕಿ ಹಣ ಪಡೆಯುವ ಎಟಿಎಂ ವ್ಯವಸ್ಥೆಯನ್ನು ನಾವೆಲ್ಲ ನೋಡಿದ್ದೇವೆ. ಆದರೆ ಹಣ ಹಾಕಿ ತರಕಾರಿ ಬೀಜ ಪಡೆಯುವ ಮಷಿನ್ ಇದುವರೆಗೆ ಯಾರೂ ನೋಡಿರಲು ಸಾಧ್ಯವಿಲ್ಲ.
ಇಂತದೊಂದು ವಿನೂತನ ಯಂತ್ರವನ್ನು ಸಿದ್ಧಪಡಿಸಿರುವುದು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಹೆಚ್‌ಆರ್). ತೋಟಗಾರಿಕೆ ಸಂಶೋಧನಾ ಸಂಸ್ಥೆ ಕಂಡು ಹಿಡಿದಿರುವ ಈ ವಿಶಿಷ್ಟ ಮಷಿನ್ ಎಟಿಎಂ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಕಾರ್ಡ್ ಬದಲಾಗಿ ಹಣ ಹಾಕಿದರೆ ನಾವು ಬಯಸುವ ಹಣ್ಣು- ತರಕಾರಿಗಳ ಬೀಜ ಪಡೆಯಬಹುದಾಗಿದೆ. ಮೊದಲ ಪ್ರಯತ್ನವೆಂಬಂತೆ ಸದ್ಯ ಈ ಯಂತ್ರವನ್ನು ಸಂಸ್ಥೆಯ ಕ್ಯಾಂಪಸ್ನಲ್ಲಿ ಇರಿಸಲಅಗಿದ್ದು, ಮುಂದೆ ವಿವಿಧೆಡೆ ವಿಸ್ತರಿಸುವ ಪ್ರಸ್ತಾವನೆಯನ್ನು ತೋಟಗಾರಿಕೆ ಇಲಾಖೆಗೆ ಕಳುಹಿಸಲಾಗಿದೆ.
ಸಂಸ್ಥೆಯ ನಿರ್ದೇಶಕ ಎಂ.ಆರ್.ದಿನೇಶ್ ಈ ಬಗ್ಗೆ ಮಾತನಾಡಿ, ಈ ಯಂತ್ರವನ್ನು ಮುಖ್ಯವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್ಚು ವಿಸ್ತರಿಸಲು ಚಿಂತನೆ ನಡೆದಿದೆ. ಜೊತೆಗೆ ಹಾಪ್ ಕಾಮ್ಸ್ನಲ್ಲೂ ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಯಂತ್ರದಲ್ಲಿ ದೊರೆಯುವ ಬೀಜಗಳನ್ನು ಟೆರೇಸ್ ಗಾರ್ಡನ್ ಅಥವಾ ಮನೆಯಲ್ಲಿ ಉಪಯೋಗಿಸಬಹುದಾಗಿದೆ. ಇನ್ನು ಸಂಸ್ಥೆಯು ಸೀಡ್ ವೆಂಡಿಂಗ್ ಮಷಿನ್ ತಯಾರು ಮಾಡಿಲ್ಲ. ಬದಲಾಗಿ ಈ ಯಂತ್ರ ಸೀಡ್ ಆನ್ ಸಪ್ಲೈ ಕೆಲಸ ಮಾಡುತ್ತೆ ಎಂದು ಮಾಹಿತಿ ನೀಡಿದರು.
ಹಣ ಹಾಕಿದರೆ ಹಣ್ಣು-ತರಕಾರಿ ಬೀಜ ಪಡೆಯೋದು ಹೇಗೆ ?
* ಬೀಜದ ಪ್ಯಾಕೆಟ್ ಪಡೆಯಲು 10 ಅಥವಾ 20 ರೂಪಾಯಿ ನೋಟನ್ನು ಯಂತ್ರಕ್ಕೆ ಗ್ರಾಹಕರೇ ನೀಡಬೇಕು (ಎಟಿಎಂ ಮಷಿನ್ನಲ್ಲಿ ಡೆಬಿಟ್ ಕಾರ್ಡ್ ಹಾಕುವ ರೀತಿಯಲ್ಲಿ)
* ನಿಮಗೆ ಬೇಕಿರುವ ತರಕಾರಿ ಬೀಜವನ್ನ ಆಯ್ಕೆ ಮಾಡಿಕೊಳ್ಳಬೇಕು.
* ಒಂದು ಪುಟ್ಟ ಪರದೆಯಲ್ಲೇ ಚಿತ್ರ ಮತ್ತು ಹೆಸರು ಒಳಗೊಂಡ ಪ್ಯಾಕೇಟ್ ದರ ನಿಗದಿ ಮಾಡಬೇಕು.
* 10 ಮತ್ತು 20 ರೂಪಾಯಿ ಮೌಲ್ಯದ ಪ್ಯಾಕೇಟ್ ಬೀಜ ಸಿಗಲಿದೆ.
* ಇತ್ತ ಹಣ ಪಾವತಿಯಾಗುತ್ತಿದ್ದಂತೆ ಯಂತ್ರದ ಕೆಳ ಭಾಗದ ಟ್ರೇನಲ್ಲಿ ಬೀಜದ ಪ್ಯಾಕೇಟ್ ಬೀಳಲಿದೆ.