ಬೆಂಗಳೂರು: ಸಂಜೆಯಾಗುತ್ತಲೇ ಡಿಸ್ಕೊಥೆಕ್, ಲೈವ್ ಬ್ಯಾಂಡ್ ಅಂತಿದ್ದ ನಗರದ ಜನರಿಗೆ ಸಿಸಿಬಿ ಬಿಗ್ ಶಾಕ್ ನೀಡಿದ್ದು ಅಕ್ರಮವಾಗಿ ಪಬ್ ನಡೆಸುತ್ತಿದ್ದ ಹೊಟೇಲ್ಗಳ ಲೈಸೆನ್ಸ್ ರದ್ದುಗೊಳಿಸಿ ಆದೇಶಿಸಿದೆ.
ನಗರದ ಎಂಜಿ ರಸ್ತೆ, ಬಿಗ್ರೇಡ್ ರಸ್ತೆ, ಇಂದಿರಾ ನಗರ, ಕೋರಮಂಗಲ ಸೇರಿ ಬಹುತೇಕ ಕಡೆಗಳ ಅಕ್ರಮವಾಗಿ ಪಬ್ಗಳನ್ನು ನಡೆಸಲಾಗುತ್ತಿತ್ತು. ಅಕ್ರಮ ಪಬ್ಗಳಿಗೆ ಪೊಲೀಸರು ಈ ಮೊದಲೇ ನೋಟಿಸ್ ನೀಡಿದ್ದರು. ಆದರೆ ಪಬ್ ಮಾಲಿಕರು ಮಾತ್ರ ಪೊಲೀಸರ ಕ್ಯಾರೆ ಎನ್ನುತ್ತಿರಲಿಲ್ಲ. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವ, ಪಬ್ಲಿಕ್ ಎಂಟರ್ಟೈನ್ಮೆಂಟ್ ಆಕ್ಟ್ 2005 ರ ಪ್ರಕಾರ ನಿಯಮ ಉಲ್ಲಂಘಿಸಿದ ಒಟ್ಟು 107 ಪಬ್ ಹಾಗೂ ಹೊಟೇಲ್ಗಳ ಪರವಾನಗಿಯನ್ನು ರದ್ದುಗೊಳಿಸಿ ಆದೇಶಿಸಿದೆ.
ಮಹತ್ವದ ಹೆಜ್ಜೆ: ಇದೇ ಮೊದಲ ಬಾರಿಗೆ ಸಿಸಿಬಿ ಪೊಲೀಸರು ಇಂಥದ್ದೊಂದು ಮಹತ್ವದ ಹೆಜ್ಜೆ ಇಟ್ಟು, ಲೈಸನ್ಸ್ ರದ್ದು ಮಾಡಿದ್ದಾರೆ. ಅಷ್ಟೇ ಅಲ್ಲದೆ, ನೀವು ಪಡೆದ ಲೈಸನ್ಸ್ ಅಣುಗುಣವಾಗಿ ಹೋಟೆಲ್ ಪಬ್ ಮಾತ್ರ ನಡೆಸಿ, ಎಂಟರ್ಟೈನ್ಮೆಂಟ್ ಕಾರ್ಯಕ್ರಮ ನಡೆಸುವ ಹಾಗಿಲ್ಲ ಎಂದು ಸಲಹೆ ಕೂಡ ಕೊಟ್ಟಿದ್ದಾರೆ. ಒಂದು ವೇಳೆ ಮತ್ತೆ ನಿಯಮ ಉಲ್ಲಂಘಿಸಿದರೆ ಜೈಲಲ್ಲಿ ಕಂಬಿ ಎಣಿಸುವ ರೀತಿ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಏನಿದು ಪಬ್ಲಿಕ್ ಎಂಟರ್ಟೈನ್ಮೆಂಟ್ ಆಕ್ಟ್ ?
ನಗರದಲ್ಲಿ ಏನೇ ಹೊಸ ವ್ಯವಹಾರ ನಡೆಸಬೇಕಾದರೆ ಸಂಬಂಧಿಸಿದ ಇಲಾಖೆಗಳ ಪರವಾನಗಿ ಕಡ್ಡಾಯ. ಅದೇ ರೀತಿ, ಪಬ್ ಹಾಗೂ ಹೋಟೆಲ್ ಗಳು ಡಿಸ್ಕೊಥೆಕ್, ಲೈವ್ ಬ್ಯಾಂಡ್, ಡಿಜೆ, ಲೈವ್ ಬ್ಯಾಂಡ್ ನಡೆಸಬೇಕಾದರೇ ನಗರ ಪೊಲೀಸ್ ಆಯುಕ್ತರಿಂದ ಪಬ್ಲಿಕ್ ಎಂಟರ್ಟೈನ್ಮೆಂಟ್ ಆಕ್ಟ್ 2005 ಅಡಿಯಲ್ಲಿ ಪರವಾನಗಿ ಪಡೆಯುವುದು ಕಡ್ಡಾಯ.