ಬೆಂಗಳೂರು: ಅನೈತಿಕ ಸಂಬಂಧ ತೊರೆಯಲು ಒಪ್ಪದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಂದು ಶವ ಎಸೆದು ಹೋಗಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಕುಮಾರ್ ಹಾಗೂ ಆತನ ಪತ್ನಿ ನೇಹಾ ಕುಮಾರಿ ಬಂಧಿತರು. ಸಜ್ಜನ್ ಸಿಂಗ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಗಳು, ಮೃತದೇಹವನ್ನು ಆರ್ಎಂಸಿ ಯಾರ್ಡ್ ಸಮೀಪದ ಸೋಮೇಶ್ವರ ನಗರದಲ್ಲಿ ಎಸೆದಿದ್ದರು.
ಬಿಹಾರ ಮೂಲದವರಾದ ಸಜ್ಜನ್ ಸಿಂಗ್, ರಾಜೇಶ್ ಕುಮಾರ್ ಹಾಗೂ ನೇಹಾ ಕುಮಾರಿ ಆರ್ಎಂಸಿ ಯಾರ್ಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ನೇಹಾ ಕುಮಾರಿ ಹಾಗೂ ಸಜ್ಜನ್ ಸಿಂಗ್ ನಡುವೆ ಅನೈತಿಕ ಸಂಬಂಧವಿತ್ತು. ಈ ಸಂಬಂಧ ಬೇಡ ದೂರವಾಗೋಣ ಎಂದು ನೇಹಾಕುಮಾರಿ ಹೇಳಿದರೂ ಸಹ ಸಜ್ಜನ್ ಸಿಂಗ್ ಒಪ್ಪಿರಲಿಲ್ಲ. ಸಜ್ಜನ್ ಸಿಂಗ್ನ ಕಾಟ ತಾಳಲಾರದೆ ನೇಹಾ ಹಾಗೂ ಪತಿ ರಾಜೇಶ್ ಕುಮಾರ್ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕತ್ತು ಕುಯ್ದು ಕೊಲೆ ಮಾಡಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಮೊದಲು ಕೊಲೆಯಾದವರನ್ನು 40 ವರ್ಷದ ಉತ್ತರ ಭಾರತ ಮೂಲದ ವ್ಯಕ್ತಿ ಎಂದು ಗುರುತಿಸಿದ್ದರು. ಮೃತ ವ್ಯಕ್ತಿ ಆರ್ಎಂಸಿ ಯಾರ್ಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಪರಿಚಯಸ್ಥ ಉತ್ತರ ಭಾರತ ಮೂಲದ ಕೆಲ ಜನರೊಂದಿಗೆ ಆಗಾಗ್ಗೆ ಗಲಾಟೆಯಾಗುತ್ತಿತ್ತು. ತಡರಾತ್ರಿ ಕೂಡ ಗಲಾಟೆ ನಡೆದಿದೆ. ಈ ವೇಳೆ ಕೊಲೆ ಮಾಡಿ ಬಳಿಕ ಶವ ಎಸೆದು ಆರೋಪಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಳೇ ವೈಷಮ್ಯಕ್ಕೆ ಕೊಲೆ-ಇಬ್ಬರು ಸೆರೆ: ಅಕ್ಟೋಬರ್ 11ರಂದು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿ ಬಾಣಸವಾಡಿ ಮುಖ್ಯರಸ್ತೆಯಲ್ಲಿ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. ರುತ್ವಿಕ್ ಮತ್ತು ಸುಮನ್ ಬಂಧಿತರು. ಮದನ್ ಅಲಿಯಾಸ್ ರಿಚರ್ಡ್ ಹತ್ಯೆಗೊಳಗಾದ ವ್ಯಕ್ತಿ. ಕೃತ್ಯಕ್ಕೆ ಸಹಕಾರ ನೀಡಿದ್ದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
2019ರಂದು ಆರೋಪಿ ರುತ್ವಿಕ್ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ಮಾಡಿ ಚೆನ್ನೈಗೆ ಪರಾರಿಯಾಗಿದ್ದ ಮದನ್ ಒಂದು ತಿಂಗಳ ಹಿಂದೆ ನಗರಕ್ಕೆ ಬಂದಿದ್ದಾನೆ. ಎಲ್ಲವನ್ನೂ ಮರೆತು ಸ್ನೇಹಿತರಾಗೋಣ ಎಂದು ಮದನ್ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ ಆರೋಪಿಗಳು ಮಾತುಕತೆಯ ವೇಳೆ ಉಂಟಾದ ಜಗಳ ತಾರಕಕ್ಕೇರಿತ್ತು. ಆರೋಪಿಗಳು ಕೊರಿಯರ್ ಬಾಯ್ನ ಬೈಕ್ ಕಸಿದು ಚೇಸ್ ಮಾಡಿ ಮದನ್ನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು ಎಂದು ಪೂರ್ವ ವಿಭಾಗ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಅತ್ತೆಯ ಹತ್ಯೆ, ಮೊಬೈಲ್ ಚಾಟಿಂಗ್ನಿಂದ ಸಂಚು ಬಯಲು: ಸೊಸೆ ಸಹಿತ ಮೂವರ ಬಂಧನ