ದೇವನಹಳ್ಳಿ (ಬೆಂಗಳೂರು ಗ್ರಾ.) : ವಿದೇಶದಿಂದ ಅಕ್ರಮವಾಗಿ ಮಕ್ಕಳ ಸ್ಟೋರಿ ಬುಕ್ನಲ್ಲಿ ಮರೆಮಾಚಿ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಆದಾಯ ತೆರಿಗೆ ಇಲಾಖೆಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 15 ಕೋಟಿ ರೂ ಮೌಲ್ಯದ 1 ಕೆಜಿ ಕೊಕೇನ್ ವಶಕ್ಕೆ ಪಡೆಯಲಾಗಿದೆ. ಕಳೆದ ಬುಧವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು 40 ವರ್ಷದ ವ್ಯಕ್ತಿ ಜಿಂಬಾಬ್ವೆ ದೇಶದ ಪಾಸ್‌ಪೋರ್ಟ್ ಹೊಂದಿದ್ದು, ಇಂಡಿಯನ್ ಟೂರಿಸ್ಟ್ ವಿಸಾದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆದಾಯ ಗುಪ್ತಚರ ನಿರ್ದೇಶನಾಲಯ (DR1) ಅಧಿಕಾರಿಗಳಿಗೆ ಕೊಕೇನ್ ಸ್ಮಗ್ಲಿಂಗ್ ಮಾಡುತ್ತಿರುವ ಮಾಹಿತಿ ಬಂದಿದ್ದು, ಇಥೋಪಿಯಾ ಏರ್ ಲೈನ್ಸ್ನಲ್ಲಿ ಅಡಿಸ್ ಅಬಾಬಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯ ಮೇಲೆ ನಿಗಾ ವಹಿಸಿದ್ದರು.
ನಂತರ ಆತನ ಲಗೇಜ್ ತಪಾಸಣೆ ನಡೆಸಿದಾಗ ಕೊಕೇನ್ ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿತ್ತು. ಪುಸ್ತಕದಲ್ಲಿ ಸಿಕ್ಕ ಪುಡಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಬಂದ ವರದಿಯಲ್ಲಿ ಕೊಕೇನ್ ಇರುವುದು ದೃಢಪಟ್ಟಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಚಿನ್ನ ಕಳ್ಳ ಸಾಗಣೆ- ಸಿಕ್ಕಿಬಿದ್ದ ಚಾಲಾಕಿಗಳು: ಕಳೆದ ಎರಡು ತಿಂಗಳ ಹಿಂದೆ, ಇದೇ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಸೀಜ್ ಮಾಡಿದ್ದರು. ಮಲೇಶಿಯಾದಿಂದ ಬಂದಿದ್ದ ಪ್ರಯಾಣಿಕರ ಮೇಲೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದ್ದು, ತೀವ್ರ ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಚಿನ್ನ ಕಳ್ಳ ಸಾಗಣಿಕೆಗಾಗಿಯೇ ವಿಶೇಷ ಒಳ ಉಡುಪು ಮಾಡಿಸಿದ್ದು ಕಂಡು ಬಂದಿತ್ತು. ಪೇಸ್ಟ್ ರೂಪದಲ್ಲಿ ತಂದಿದ್ದ 2.2 ಕೆಜಿಯ 1 ಕೋಟಿ 33 ಲಕ್ಷ ಮೌಲ್ಯದ ಚಿನ್ನ ವಶವನ್ನು ಪಡೆದಿದ್ದರು. ದುಬೈನಿಂದ ಇಕೆ 568 ವಿಮಾನದಲ್ಲಿ ಬಂದಿದ್ದ ಮೂವರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ : ಕಾರು ಆಫರ್.. ಆನ್‌ಲೈನ್ ಗೇಮ್: ಬರೋಬ್ಬರಿ 29 ಲಕ್ಷ ರೂ ಕಳೆದುಕೊಂಡ ಕಾಫಿನಾಡಿನ ಯುವಕ