ಆನೇಕಲ್ (ಬೆಂಗಳೂರು): ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡ ಪ್ರಕರಣ ಸಂಬಂಧ ಮಾಲೀಕ ಮತ್ತು ಅವರ ಪುತ್ರನನ್ನು ಬಂಧಿಸಿದ್ದೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.
ಡಿಜಿಪಿ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪ್ರಕರಣ ಸಂಬಂಧ ಈಗಾಗಲೇ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಲೀಕ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಮಾಲೀಕ ಮತ್ತು ಅವರ ಮಗನನ್ನು ಬಂಧಿಸಿದ್ದು, ಇನ್ನುಳಿದ ಮೂವರನ್ನು ಶೀಘ್ರದಲ್ಲೇ ಬಂಧಿಸಲಿದ್ದೇವೆ" ಎಂದು ತಿಳಿಸಿದರು.
"ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿ, ಬೆಂಕಿ ಪಕ್ಕದ ಅಂಗಡಿಗಳಿಗೆ ಹಬ್ಬದಂತೆ ತಡೆದಿದ್ದಾರೆ. ದುರಂತದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಯಾವೆಲ್ಲ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುತ್ತೇವೆ. ಘಟನೆ ಕಾರಣ ಏನು ಎಂಬುದು ತನಿಖೆಗಳ ಬಳಿಕವಷ್ಟೇ ಗೊತ್ತಾಗಲಿದೆ" ಎಂದು ಡಿಜಿಪಿ ಮಾಹಿತಿ ನೀಡಿದರು.
"ರಾಜ್ಯದಲ್ಲಿ ಎಲ್ಲೆಲ್ಲಿ ಸ್ಫೋಟಕ ಮತ್ತು ಪಟಾಕಿ ಸಾಮಗ್ರಿಗಳಿವೆಯೋ ಅಲ್ಲೆಲ್ಲ ಯಾವ ರೀತಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ ಮತ್ತು ಯಾವ ಲೈಸನ್ಸ್ ಪಡೆದಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಮುಂದೆ ದುರಂತಗಳು ಸಂಭವಿಸದಂತೆ ನೋಡಿಕೊಳ್ಳುತ್ತೇವೆ" ಎಂದರು.
"ಒಟ್ಟು 35 ಜನರು ಪಟಾಕಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದು, 14 ಜನರಿಗೆ ಹೊರಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಇದು ತುಂಬಾ ನೋವಿನ ದುರಂತ" ಎಂದು ಅಲೋಕ್ ಮೋಹನ್ ತಿಳಿಸಿದರು.
ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ: ಪಟಾಕಿ ದುರಂತ ಸಂಬಂಧ ಸ್ಫೋಟಕ ಕಾಯಿದೆ ಪ್ರಕಾರ ಐಪಿಸಿ ಸೆಕ್ಷನ್ 285, 286, 337, 338, 427, 304 ಅಡಿಯಲ್ಲಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪಟಾಕಿ ಶಾಪ್ ಪರವಾನಗಿ ಹೊಂದಿದ್ದ ರಾಮಸ್ವಾಮಿ ರೆಡ್ಡಿ, ಅಂಗಡಿ ನಡೆಸುತ್ತಿದ್ದ ಅವರ ಪುತ್ರ ನವೀನ್ ರೆಡ್ಡಿ, ಜಾಗದ ಮಾಲೀಕರಾದ ಜಯಮ್ಮ ಹಾಗೂ ಪುತ್ರ ಅನಿಲ್ ರೆಡ್ಡಿ, ಅಂಗಡಿ ಮ್ಯಾನೇಜರ್ ಲೋಕೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಶನಿವಾರ ನಡೆದ ಅತ್ತಿಬೆಲೆ ಪಟಾಕಿ ದುರಂತದಲ್ಲಿ ತಮಿಳುನಾಡಿನ 14 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ 8 ಜನ ವಿದ್ಯಾರ್ಥಿಗಳಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ: ಮೃತರ ಗುರುತು ಪತ್ತೆ, ಒಂದೇ ಗ್ರಾಮದ 8 ವಿದ್ಯಾರ್ಥಿಗಳು ಸಾವು!