ಬೆಂಗಳೂರು: ಪೌರತ್ವ ಕಾಯ್ದೆ ಕುರಿತು ಅಲ್ಪಸಂಖ್ಯಾತರು ಕಾನೂನು ಬಗ್ಗೆ ಮಾಹಿತಿ ಹಾಗೂ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಡಿ.23 ರಂದು ಸಭೆ ಸೇರುತ್ತಿದ್ದಾರೆ.
ಭಾರತಿ ನಗರದ ಕುರ್ದುಸಾಬ್ ದರ್ಗಾದಲ್ಲಿ ಸೇರುತ್ತಿದ್ದು, ಈ ಹಿನ್ನೆಲೆ ಕೆಲವು ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಟಿ ನಡೆಸಿದ ಅವರು ಪೌರತ್ವ ಕಾಯ್ದೆ ಪರ ಮತ್ತು ವಿರೋಧವಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಹಿನ್ನೆಲೆ ಡಿ.19 ರಂದು ಬೆಳಗ್ಗೆ 6 ಗಂಟೆಯಿಂದ ಡಿ.21 ಮಧ್ಯರಾತ್ರಿ 12 ಗಂಟೆವರೆಗೆ ಸೆಕ್ಷನ್ 144 ಜಾರಿಗೊಳಿಸಿ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಮೊದಲ ದಿನ ಸಾಕಷ್ಟು ಕಡೆ ಪ್ರತಿಭಟನೆ ಮುಕ್ತಾಯವಾಗಿತ್ತು. ಎರಡನೇ ದಿನ ಕೆಲವೆಡೆ ಮಾತ್ರ ಪ್ರತಿಭಟನೆ ಕಾರ್ಯಕ್ರಮ ನಡೆಸಲಾಗಿತ್ತು. ಶನಿವಾರ ಯಾವುದೇ ರೀತಿಯ ಪ್ರತಿಭನಟನೆ ನಡೆಯಲಿಲ್ಲ. ಎಲ್ಲವೂ ಶಾಂತಿಯುತವಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದರು.
ರಾಜ್ಯದಲ್ಲಿರುವ ಮುಸ್ಲಿಂ ಬಾಂಧವರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ನಿರಾತಂಕವಾಗಿರಿ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ವಿಚಾರವಾಗಿ ಮುಸ್ಲಿಂ ಬಾಂಧವರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಭೆ ಸೇರುತ್ತಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಅವಕಾಶ ಕೊಡಲಾಗಿದೆ. ಪೂರ್ವ ವಿಭಾಗದ ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಭೆ ನಡೆಯಲಿದ್ದು, ಅಲ್ಲಿನ ಡಿಸಿಪಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಿದ್ದಾರೆ ಎಂದು ತಿಳಿಸಿದರು.
ಆರೋಪಿಗಳ ಮೇಲೆ ಪೊಲೀಸರ ಕಣ್ಣು:
ಕಾಲೇಜಿನಲ್ಲಿ ಅವಹೇಳನಕಾರಿ ಪೋಸ್ಟರ್ ಪ್ರದರ್ಶನ ಮಾಡಿರುವವರ ವಿರುದ್ಧ ಈಗಾಗಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪ್ಪು ಮಾಡಿ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇರುತ್ತದೆ. ಅದನ್ನು ಮೀರಿ ಅವರು ವರ್ತಿಸಿದ್ದಾರೆ. ಅವರ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಎಚ್ಚರಿಸಿದರು.