ಬೆಂಗಳೂರು: ಕಾನೂನು ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಡ್ಯಾನ್ಸ್ ಬಾರ್ನಲ್ಲಿದ್ದ ವಿವಿಧ ರಾಜ್ಯಗಳ 28 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ.
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ 6ನೇ ಬ್ಲಾಕ್ನಲ್ಲಿನ ಕಟ್ಟಡವೊಂದರ 2 ಮತ್ತು 3ನೆಯ ಮಹಡಿಯಲ್ಲಿ ಆರೋಪಿಗಳ ಸಿಕ್ಸ್ ದೇಸಿ ಪಬ್ ಬಾರ್ ಇದೆ. ಆದರೆ ಪಬ್ ಬಾರ್ ಮತ್ತು ರೆಸ್ಟೋರೆಂಟ್ ಪರವಾನಿಗೆ ಪಡೆದು ಡ್ಯಾನ್ಸ್ ಬಾರ್ ಅಕ್ರಮವಾಗಿ ನಡೆಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರ್‌ನಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘಿಸಿ ಡ್ಯಾನ್ಸ್ ಬಾರ್ ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದ್ದು, 28 ಮಹಿಳೆಯರನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ: ಹಿಜಾಬ್ ಹಿಂದೆ ಐಸಿಸ್ ಕೈವಾಡ ಇದೆ : ಕಂದಾಯ ಸಚಿವ ಆರ್ ಅಶೋಕ್ ಗಂಭೀರ ಆರೋಪ
ಆರೋಪಿಗಳಿ೦ದ 8,900 ರೂ. ನಗದು ಹಾಗೂ 50 ರೂ. ಮುಖ ಬೆಲೆಯ ಕ್ರೇಜಿ ನೈಟ್ ಟೋಕನ್ ಸೇರಿದಂತೆ 2,325 ಟೋಕನ್, ಸೌಂಡ್ ಸಿಸ್ಟಮ್, ಸ್ವೈಪಿಂಗ್ ಮಿಷನ್ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ಕೋರಮಂಗಲ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ. ಸಿಕ್ಸ್ ದೇಸಿ ಪಬ್ ಬಾರ್ ಮತ್ತು ರೆಸ್ಟೋರೆಂಟ್‌ನ ಲೈಸೆನ್ಸ್ ರದ್ದುಪಡಿಸಲು ಬಿಬಿಎಂಪಿಗೆ ತಿಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರ, ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.