ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಸಿಸಿಬಿ ಪೊಲೀಸರು ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ದಂಧೆಯ ಜಾಲವನ್ನು ಬಯಲಿಗೆಳೆದಿದ್ದರು. ಈ ಪ್ರಕರಣ ಸ್ಥಳೀಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೂ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡಿತ್ತು. ಈ ಕೇಸ್ ಬೆನ್ನು ಹತ್ತಿದ ಸಿಸಿಬಿ ಪೊಲೀಸರಿಗೆ ಇದೀಗ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕವೂ ಸಾಥ್ ಕೊಟ್ಟಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು:
ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ದಂಧೆಯಲ್ಲಿ ಕೇವಲ ದೇಶೀಯ ಆಟಗಾರರಷ್ಟೇ ಅಲ್ಲ. ಅಂತರಾಷ್ಟ್ರೀಯ ಮಟ್ಟದ ಆಟಗಾರರೂ ಕೂಡಾ ಅಕ್ರಮದಲ್ಲಿ ಭಾಗಿಯಾಗಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ವಿದೇಶಿ ಕ್ರಿಕೆಟ್ ಆಟಗಾರರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಸಿಸಿಬಿ ತನಿಖೆಗೆ ಬಿಸಿಸಿಐನ ಭ್ರಷ್ಟ್ರಾಚಾರ ನಿಗ್ರಹ ಘಟಕ ಸಾಥ್:
ಸಿಸಿಬಿಯ ಹಿರಿಯ ಆಧಿಕಾರಿಗಳ ಜೊತೆ ಸಂಪರ್ಕದಲ್ಲಿರುವ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಕುರಿತು ಪೂರಕ ತನಿಖೆಗೆ ಸಹಕಾರ ನೀಡುತ್ತಿದೆ. ಎಸಿಯು ಘಟಕ ಈ ಹಿಂದೆಯೂ ಕೂಡ ಫಿಕ್ಸಿಂಗ್ ವಿಚಾರದಲ್ಲಿ ಮುಖಭಂಗ ಅನುಭವಿಸಿರುವ ಉದಾಹರಣೆಗಳಿವೆ. ಹೀಗಾಗಿ ಎಸಿಯು ಇದೇ ವಿಚಾರಕ್ಕೆ ಕೆಪಿಎಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಸಿಸಿಬಿಗೆ ಕೆಲ ಮಾಹಿತಿ ರವಾನಿಸಿ ತನಿಖೆ ಚುರುಕುಗೊಳಿಸಿದೆ.
ಪ್ರಕರಣದಲ್ಲಿ ಬೆಳಗಾವಿ ಮಾಲೀಕ ಅಷ್ಟಕ್ ಅಲಿ, ಡ್ರಮ್ಮರ್ ಭವೇಶ್ ಬಾಫ್ನಾನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಹಲವು ಆಟಗಾರರನ್ನು ವಿಚಾರಣೆಗೆ ಒಳಪಡಿಸಿದೆ.