ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಲ್ಲಿ ಈಗಾಗಲೇ ಇರುವ ಕಟ್ಟಡಗಳ ಮಾಲೀಕರು ತಮ್ಮ ದಾಖಲೆಗಳನ್ನು ಒದಗಿಸುವಂತೆ ಕರೆ ನೀಡಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿ.ನ್ಯಾಯಮೂರ್ತಿ ಚಂದ್ರಶೇಖರ್, ಸುಪ್ರೀಂ ಕೋರ್ಟ್ ರಚನೆ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿ ಮಾರ್ಚ್ ಒಂದರಿಂದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಮೇಡಿ ಅಗ್ರಹಾರ, ವಡೇರಹಳ್ಳಿ ಪಂಚಾಯಿತಿಯಲ್ಲಿ ಸಹಾಯ ಕೇಂದ್ರ ತೆರೆಯಲಿದ್ದು, ಇಲ್ಲಿಗೆ ಸ್ಥಳೀಯ ನಿವಾಸಿಗಳು ಬಂದು ತಮ್ಮ ಕಟ್ಟಡದ ದಾಖಲೆಗಳನ್ನು ನೀಡಬಹುದಾಗಿದೆ ಎಂದರು.
ಈ ಪೈಲೆಟ್ ಪ್ರಾಜೆಕ್ಟ್ ಯಶಸ್ವಿಯಾದ ಬಳಿಕ ಸೋಮಶೆಟ್ಟಿಹಳ್ಳಿ, ಬ್ಯಾಲಕೆರೆ, ಸಿಂಗನಾಯಕನಹಳ್ಳಿ, ಹಾಗೂ ಬಿಡಿಎ ಕೇಂದ್ರ ಕಚೇರಿಯಲ್ಲೂ ಸಹಾಯ ಕೇಂದ್ರ ತೆರೆಯಲಿದೆ. ಸುಪ್ರೀಂ ಕೋರ್ಟ್ ಆದೇಶದಂತೆ, ಡಾ.ಶಿವರಾಮ ಕಾರಂತ ಬಡಾವಣೆಯ ರಚನೆಗೆ ಅಂತಿಮ ಅಧಿಸೂಚಿತ ಪ್ರದೇಶಗಳಲ್ಲಿ ದಿ. 03.08.2018 ಕ್ಕೆ ಮುಂಚಿತವಾಗಿ ನಿರ್ಮಿಸಿರುವ ಕಟ್ಟಡ ಮತ್ತು ಮನೆಗಳ ಬಗ್ಗೆ ಪರಿಶೀಲಿಸಿ ಸುಪ್ರೀಂಕೋರ್ಟ್ಗೆ ವರದಿ ನೀಡುವಂತೆ ಸೂಚಿಸಿತ್ತು. ಪರಿಶೀಲನೆಗಾಗಿ ಹಳ್ಳಿಗಳಲ್ಲೇ ಸಹಾಯಕೇಂದ್ರ ತೆರೆದು ಜನರಿಂದ ದಾಖಲೆ ಸಂಗ್ರಹಿಸಲಾಗುವುದು. ಬಳಿಕ ಅಂತಿಮ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ಜಸ್ಟಿಸ್ ಚಂದ್ರಶೇಖರ್ ತಿಳಿಸಿದರು.
ಬಡಾವಣೆಗೆ ಅಧಿಸೂಚಿತ ಜಾಗದಲ್ಲಿ 3,546 ಎಕರೆ 12 ಗುಂಟೆ ಜಾಗ ಇದ್ದು, ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಹಾಗೂ ಯಲಹಂಕ ವ್ಯಾಪ್ತಿಯ 17 ಹಳ್ಳಿಗಳು ಬರಲಿವೆ. ಆರಂಭದಲ್ಲಿ ಸರ್ಕಾರ 30.12.2008 ರಲ್ಲಿ ಬಡಾವಣೆಗೆ ಅಧಿಸೂಚನೆ ಹೊರಡಿಸಿತ್ತು. ನಂತರ 26.11.2014 ರಲ್ಲಿ ಸ್ಥಳೀಯ ನಿವಾಸಿಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ, ಹೈಕೋರ್ಟ್ ಈ ಅಧಿಸೂಚನೆಯನ್ನು ರದ್ದುಪಡಿಸಿತ್ತು. ನಂತರ ಬಿಡಿಎ ಸುಪ್ರೀಂಕೋರ್ಟ್ ಮೆಟ್ಟಿಲೇರಿದಾಗ ಬಡಾವಣೆ ರಚಿಸಲು 3.08.2018 ಕ್ಕೆ ಆದೇಶ ಹೊರಡಿಸಿತ್ತು. ಅಲ್ಲದೇ, ಈಗಾಗಲೇ ಮನೆ, ಕಟ್ಟಡ ನಿರ್ಮಾಣ ಮಾಡಿಕೊಂಡಿರುವವರಿಗೆ ಪರಿಹಾರ ಅಥವಾ ಬದಲಿ ನಿವೇಶನ ಕೊಡುವ ಸಲುವಾಗಿ, ಕಾನೂನಾತ್ಮಕವಾಗಿ 3.08.2018 ಕ್ಕೆ ಮುಂಚಿತವಾಗಿ ನಿರ್ಮಾಣವಾಗಿರುವ ಕಟ್ಟಡಗಳ ವರದಿ ನೀಡಲು ಸುಪ್ರೀಂ ಈ ಸಮಿತಿ ರಚನೆ ಮಾಡಿದೆ.
ಈ ಬಗ್ಗೆ ಎಲ್ಲಾ ಮನೆಗಳಿಗೂ ಈಗಾಗಲೇ ಮಾಹಿತಿ ನೀಡುವ ನೋಟಿಸ್ ನೀಡಲಾಗಿದೆ. ಕರಪತ್ರ ಹಂಚಲಾಗಿದೆ. ಏರಿಯಲ್ ಸರ್ವೇ ಪ್ರಕಾರ, 2008 ರಲ್ಲಿ 2500 ಕಟ್ಟಡ ಮಾತ್ರ ಇತ್ತು. 2018 ರವರೆಗೆ 7,500 ಕಟ್ಟಡಗಳು ನಿರ್ಮಾಣ ಆಗಿವೆ. 3-08-2018 ರ ನಂತರ ನಿರ್ಮಾಣ ಆದ ಕಟ್ಟಡಗಳು ಅಕ್ರಮ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ ಎಂದರು.
ಓದಿ: ಕಾವೇರಿ ಜಲವಿವಾದ ಸಂಬಂಧ ಕಾನೂನು ಹೋರಾಟಕ್ಕೆ ನಿರ್ಧಾರ: ಸಚಿವ ಬೊಮ್ಮಾಯಿ
ನಾಗರಿಕರು ಮನೆಯಲ್ಲಿಯೇ ಕುಳಿತು jcc.skl.in ಆನ್ಲೈನ್ ವೆಬ್ ಪೋರ್ಟಲ್ ಮೂಲಕವೂ ಅಧಿಕೃತ ದಾಖಲೆ ಸಲ್ಲಿಸಬಹುದು. ಅಲ್ಲದೆ, ಸಹಾಯಕೇಂದ್ರವೂ ಸಾರ್ವಜನಿಕ ರಜಾ ದಿನ ಹೊರತುಪಡಿಸಿ, ಬೆಳಗ್ಗೆ 10-30 ರಿಂದ 4-30 ರ ವರೆಗೆ ಕಾರ್ಯನಿರ್ವಹಿಸಲಿದೆ. ನಾಗರಿಕರಿಂದ ಒಂದೇ ಬಾರಿಗೆ ಹೆಚ್ಚು ಸಂಖ್ಯೆಯಲ್ಲಿ ಅರ್ಜಿಗಳು ಬಂದಾಗ ಸ್ವೀಕರಿಸಲು ಹಾಗೂ ಪರಿಶೀಲಿಸಲು ಸಿ.ಎಂ.ಆರ್ ಕಾನೂನು ಕಾಲೇಜಿನ 42 ವಿದ್ಯಾರ್ಥಿಗಳನ್ನೂ ತರಬೇತಿ ನೀಡಿ ಸಿದ್ಧಗೊಳಿಸಲಾಗಿದೆ. ಈ ಪರಿಶೀಲನೆ ಕೇವಲ ಕಟ್ಟಡಗಳು, ಮನೆಗಳಿಗೆ ಸಂಬಂಧಿಸಿದ್ದಾಗಿದ್ದು, ನಿವೇಶನಗಳಿಗೆ ಸಂಬಂಧಿಸಿಲ್ಲ ಎಂದು ತಿಳಿಸಿದರು.