ಬೆಂಗಳೂರು: ಬೇಲೂರು ಮತ್ತು ಸಕಲೇಶಪುರ ನಡುವೆ ರೈಲು ಮಾರ್ಗ ನಿರ್ಮಾಣ ಪ್ರಸ್ತಾವನೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಸಕಲೇಶಪುರ ತಾಲೂಕಿನ ಹುಲ್ಲಗಳ್ಳಿಯ ನಿವಾಸಿ ಎಚ್ ಸಿ ನಂದೀಶ್ ಸೇರಿ ಮತ್ತೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ, ಸರ್ಕಾರದ ನೀತಿ ನಿರೂಪಣೆ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ಸರ್ಕಾರದ ಆಡಳಿತಾತ್ಮಕ ವಿಚಾರ: ಯೋಜನೆಗೆ ಹಣಕಾಸು ಒದಗಿಸುವುದು ಆಡಳಿತಾತ್ಮಕ ವಿಚಾರವಾಗಿದೆ. ಸಾಮಾಜಿಕ ಮತ್ತು ತಾಂತ್ರಿಕ ಅಂಶಗಳನ್ನು ಪರಿಗಣಿಸಿ ರೈಲ್ವೆ ಮಾರ್ಗವನ್ನು ನಿರ್ಧರಿಸಬಹುದು ಎಂದು ಕೇಂದ್ರ ಸರ್ಕಾರ ಹಾಗೂ ಇತರರು ಮತ್ತು ಜೆ.ಡಿ ಸೂರ್ಯವಂಶಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪು ಉಲ್ಲೇಖಿಸಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಅಲ್ಲದೇ, ಸರ್ಕಾರದ ಆಡಳಿತಾತ್ಮಕ ವಿಚಾರ ಮತ್ತು ಶಾಸನ ಬದ್ಧ ಸಂಸ್ಥೆಗಳು ಸರ್ಕಾರದ ಇಲಾಖೆಗಳ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶ ಮಾಡಲಾಗುವುದಿಲ್ಲ ಎಂದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪರ್ಯಾಯ ರೈಲು ಮಾರ್ಗ: ಚಿಕ್ಕಮಗಳೂರು - ಬೇಲೂರು - ಸಕಲೇಶಪುರ ಮಾರ್ಗದ ಯೋಜನೆಯನ್ನು ಕೈ ಬಿಟ್ಟರೂ ಚಿಕ್ಕಮಗಳೂರು ಬೇಲೂರು ಹಾಸನಕ್ಕೆ ಪರ್ಯಾಯ ರೈಲು ಮಾರ್ಗ ಪ್ರಸ್ತಾಪಿಸಲಾಗಿದೆ. ಈ ಮಾರ್ಗವು ಹಾಸನ ದಿಂದ ಸಕಲೇಶಪುರದವರೆಗೂ ಮುಂದುವರೆದು ಬಳಿಕ ಮಂಗಳೂರು ತಲುಪಲಿದೆ. ಇದರಿಂದ ಈ ಭಾಗದ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ಜತೆಗೆ, ಯೋಜನೆಯ ಕುರಿತು ಚರ್ಚೆಯಾಗಿ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಲಾಗದು. ಆಡಳಿತಾತ್ಮಕ ಮತ್ತು ಆರ್ಥಿಕ ಸಮಸ್ಯೆಗಳಿದ್ದಲ್ಲಿ ಅಂತಹ ಯೋಜನೆಗಳನ್ನು ಜಾರಿ ಮಾಡಲು ಸೂಚನೆ ನೀಡುವುದಕ್ಕೆ ಸಾಧ್ಯವಿಲ್ಲ. ತಾಂತ್ರಿಕ ಮತ್ತು ಆರ್ಥಿಕ ಕಾರ್ಯ ಸಾಧ್ಯತೆಗಳನ್ನು ಪರಿಗಣಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಪ್ರಕರಣ ಸಂಬಂಧ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಶೀಲಿಸಿ ನ್ಯಾಯಪೀಠ, ಅರ್ಜಿದಾರರು ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಪರಿಣಿತಿ ಹೊಂದಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ನಿಯಮಗಳ ಪ್ರಕಾರ ಈ ರೀತಿಯ ಪರಿಣಿತಿ ಇಲ್ಲದವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ ಏನು?: ಉದ್ದೇಶಿತ ಬೇಲೂರು - ಸಕಲೇಶಪುರ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2019ರ ಜನವರಿ 17ರಂದು ಪರಿಶೀಲನೆ ನಡೆಸಿತ್ತು. ಈ ಮಾರ್ಗದ ಯೋಜನಾ ವೆಚ್ಚ ಹೆಚ್ಚಾಗಲಿದೆ. ಹೀಗಾಗಿ ಯೋಜನೆ ಮುಂದುವರೆಸುವುದು ಕಾರ್ಯಸಾಧುವಲ್ಲ ಎಂದು ತಿಳಿಸಿ ಕಾಮಗಾರಿ ಕೈ ಬಿಡುವುದಾಗಿ ಪ್ರಕಟಿಸಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರರು, ಕಾಮಗಾರಿ ಜಾರಿಯಾದಲ್ಲಿ ಈ ಭಾಗದ ಜನತೆಗೆ ಸಾಕಷ್ಟು ನೆರವಾಗಲಿದೆ. ಹೀಗಾಗಿ ಯೋಜನೆ ಕೈ ಬಿಡದಂತೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಕೇಂದ್ರ ರೈಲೆ ಸಚಿವರು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ನಡುವೆ ಈ ಯೋಜನೆ ಕುರಿತು ಚರ್ಚೆಯಾಗಿದೆ. ಹೀಗಾಗಿ ಯೋಜನೆ ಜಾರಿ ಮಾಡಬೇಕು ಎಂಬುದಾಗಿ ಅರ್ಜಿದಾರರ ವಾದವನ್ನು ಹೈಕೋರ್ಟ್ ತಿರಸ್ಕರಿಸಿತು.
ಇದನ್ನೂ ಓದಿ: ಮಹೇಶ್ ರಾಜಕೀಯ ಅಂತ್ಯ ಆರಂಭ : ಕೈ ಸೇರ್ತಿದ್ದಾರೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದ ಡಿಕೆಶಿ