ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮಕ್ಕೆ ಆಟೋರಾಜ ಹಾಗೂ ಮಯೂರ ಚಿತ್ರಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಹಿರಿಯ ನಿರ್ದೇಶಕ ವಿಜಯ್ ರೆಡ್ಡಿ ಅತಿಥಿಯಾಗಿ ಆಗಮಿಸಿದ್ದರು.
ನಗರದ ಗಾಂಧಿ ಭವನದಲ್ಲಿ ನಡೆದ ಬೆಳ್ಳಿಹೆಜ್ಜೆ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜಕುಮಾರ್, ಹಿರಿಯ ನಟಿ ಜಯಂತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಟಿ ಆರ್ ಜಯರಾಜ್ ಹಾಗೂ ಮಾಜಿ ಅಧ್ಯಕ್ಷರಾದ ಚಿನ್ನೇಗೌಡರು, ಸಾ ರಾ ಗೋವಿಂದ್, ಹಿರಿಯ ನಟ ಅಶೋಕ್, ಪೋಷಕ ಹಾಸ್ಯ ಕಲಾವಿದರಾದ ಜನಾರ್ಧನ್ ಹಾಗೂ ಉಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಹಿರಿಯ ನಿರ್ದೇಶಕರಾದ ವಿಜಯರೆಡ್ಡಿ ಅವರ ಸಿನಿಮಾ ಪಯಣದ ಕುರಿತ ಸಾಕ್ಷ ಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲದೆ ವಿಜಯ್ ರೆಡ್ಡಿ ಅವರ ಛಾಯಾಚಿತ್ರಗಳನ್ನು ಸಹ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲಾಯ್ತು.
ವಿಶೇಷ ಅಂದ್ರೆ ವಿಜಯ ರೆಡ್ಡಿ ಅವರು ಮೂಲತಃ ಆಂಧ್ರದವರಾದರೂ ಸಹ ಕನ್ನಡ ಭಾಷೆಯ ಮೇಲೆ ಹಿಡಿತ ವಿಟ್ಟುಕೊಂಡು ಅದ್ಭುತ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ.
ಇನ್ನು ಕಾರ್ಯಕ್ರಮದ ನಂತರ ಈಟಿವಿ ಭಾರತ್‌ಗೆ ಪ್ರತಿಕ್ರಿಯಿಸಿದ ನಟ ರಾಘವೇಂದ್ರ ರಾಜಕುಮಾರ್, ವಿಜಯರೆಡ್ಡಿ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ವಿಜಯರೆಡ್ಡಿ ಅವರನ್ನು ನೋಡಿದರೆ ನಮ್ಮ ಅಪ್ಪಾಜಿ ನೆನಪಿಗೆ ಬರುತ್ತಾರೆ. ಅಪ್ಪಾಜಿಗೆ ಮಯೂರ, ಸನಾದಿ ಅಪ್ಪಣ್ಣ ದಂತಹ ವಿಭಿನ್ನ ಚಿತ್ರಗಳನ್ನು ವಿಜಯ್ ರೆಡ್ಡಿ ಅವರು ನಿರ್ದೇಶನ ಮಾಡಿದ್ದರು. ಅಲ್ಲದೆ ಗಂಧದಗುಡಿ, ಗಂಧದಗುಡಿ ಭಾಗ-2 ಚಿತ್ರಗಳ ಸಂದರ್ಭದಲ್ಲಿ ನಾನು ಅವರ ಕೆಲಸವನ್ನು ನೋಡಿದೆ. ಅವರು ಅದ್ಭುತ ನಿರ್ದೇಶಕರು. ಅಲ್ಲದೆ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮಕ್ಕೆ ಅವರು ಬಂದಿರುವುದು ತುಂಬಾ ಖುಷಿಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.