ಬೆಂಗಳೂರು: ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡ ಸಿದ್ದೇಶ್ ಯಾದವ್ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಪಕ್ಷದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಯಾದವ್, ಸಭೆ ಮುಗಿಸಿ ಹೊರಗೆ ಬಂದಾಗ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿತಾದರೂ ಅಷ್ಟರಲ್ಲಿ ನಿಧನರಾಗಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಚಿತ್ರದುರ್ಗದ ಹಿರಿಯೂರು ತಾಲೂಕಿನ ಸಿದ್ದೇಶ್ ಯಾದವ್ ಜಿಲ್ಲಾ ಪ್ರಭಾರಿಗಳ ಸಭೆಗೆ ಪಾಲ್ಗೊಳ್ಳಲು ಬಂದಿದ್ದರು. ಸಭೆ ಮುಗಿಸಿ ಹೊರಗೆ ಬಂದಾಗ ಕುಸಿದು ಬಿದ್ದ ಸಿದ್ದೇಶ್ ಯಾದವ್ರನ್ನು ತಕ್ಷಣ ಕೆಸಿ ಜನರಲ್ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತು, ಆದರೆ ಈ ಸಂದರ್ಭದಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ''ಇಂದು ನಮ್ಮ ಕಾರ್ಯಕರ್ತ ಸಿದ್ದೇಶ ಮೃತಪಟ್ಟಿದ್ದಾರೆ. ಬಳ್ಳಾರಿ, ರಾಯಚೂರು ಸೇರಿ ನಾಲ್ಕು ಜಿಲ್ಲೆಯ ವಿಭಾಗದ ಪ್ರಭಾರಿ ಆಗಿದ್ದರು.
ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾದರು. ಲಘು ಹೃದಯಗಾತದಿಂದ ಮೃತಪಟ್ಟಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.
ಸಿದ್ದೇಶ್ ನಿಧನಕ್ಕೆ ಕಟೀಲ್ ಸಂತಾಪ: ಸಿದ್ದೇಶ್ ಯಾದವ್ ಅಕಾಲಿಕ ನಿಧನ ಆಘಾತಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾಗಿ ಅವರು ಬಿಜೆಪಿಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಪರಿವಾರದ ಸಂಘಟನೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದು, ಅವರ ನಿಧನ ಅತ್ಯಂತ ನೋವು ತಂದಿದೆ ಎಂದು ತಿಳಿಸಿದ್ದಾರೆ. ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಸಿಟಿ ರವಿ ಸಂತಾಪ: ಸಿದ್ದೇಶ್ ಯಾದವ್ ದೈವಾಧೀನರಾಗಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾಗಿ ಬಿಜೆಪಿಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಪರಿವಾರದ ಸಂಘಟನೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದು, ಅವರ ನಿಧನ ಅತ್ಯಂತ ನೋವು ತಂದಿದೆ. ಮೃತರ ಆತ್ಮಕ್ಕೆ ದೇವರು ಶಾಂತಿಯನ್ನು ಕೊಡಲಿ ಹಾಗೂ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ತಾಳಿಕೊಳ್ಳುವ ಧೈರ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.