ಬೆಂಗಳೂರು: ಜುಲೈ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 2021-2022 ಶೈಕ್ಷಣಿಕ ವರ್ಷದ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಜೂನ್ 15 ರಿಂದ ಹೊಸ ಶೈಕ್ಷಣಿಕ ವರ್ಷದ ತಯಾರಿ ಆರಂಭವಾಗಲಿದ್ದು, ಶಾಲಾ ಪ್ರವೇಶ, ದಾಖಲಾತಿ ಆಂದೋಲನ, ಶಾಲಾ ಹಂತದ ವಾರ್ಷಿಕ ಕ್ರಿಯಾ ಯೋಜನೆಗೆ ಪೂರ್ವ ಸಿದ್ಧತೆ ನಡೆಸಲು ಸೂಚನೆ ನೀಡಲಾಗಿದೆ.
ಕೊರೊನಾ ತೀವ್ರತೆ ನೋಡಿಕೊಂಡು ಆಫ್ಲೈನ್ ಕ್ಲಾಸ್ ನಡೆಸಬೇಕಾ ಅಥವಾ ಆನ್ಲೈನ್ ಕ್ಲಾಸ್ ನಡೆಸಬೇಕಾ ಎಂಬ ನಿರ್ಧಾರ ಕೈಗೊಳ್ಳಲಿದ್ದಾರೆ. 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿ ಪ್ರತಿ ವರ್ಷ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸಲು 220 ಕರ್ತವ್ಯದ ದಿನಗಳನ್ನು ನಿಗದಿಪಡಿಸಲಾಗುತ್ತದೆ.
ಅದರಂತೆ ಜೂನ್ 1 ರಿಂದ ಪಾರಂಭಿಸಿ ಏಪ್ರಿಲ್ 10 ರವರೆಗೆ ಶೈಕ್ಷಣಿಕ ಚಟುವಟಿಕೆ ನಿರ್ವಹಿಸಲಾಗುತ್ತದೆ. ಆದರೆ ಪ್ರಸ್ತುತ ಕೋಪಿಡ್-19 ಹಿನ್ನೆಲೆಯಲ್ಲಿ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಈ ಮುಂದಿನಂತೆ ಸಲಹಾತ್ಮಕವಾಗಿ ರೂಪಿಸಲಾಗಿದೆ.
ಜುಲೈ 1 ರಿಂದ ಶಾಲೆ ಪ್ರಾರಂಭಿಸಿ ಏಪ್ರಿಲ್ 30, 2022 ರವರೆಗೆ ಶೈಕ್ಷಣಿಕ ಚಟುವಟಿಕೆ ನಿರ್ವಹಿಸಿದಲ್ಲಿ ಒಟ್ಟು 243 ಕರ್ತವ್ಯದ ದಿನಗಳು ಲಭ್ಯವಾಗುತ್ತಿದ್ದು, 11 ದಿನಗಳನ್ನು ದಸರಾ ರಜೆಗಾಗಿ ಮತ್ತು 14 ದಿನಗಳನ್ನು ಶಾಲಾ ಸ್ಥಳೀಯ ರಜೆಗಳಿಗೆ ಉಳಿದ 228 ಶಾಲಾ ಕರ್ತವ್ಯದ ದಿನಗಳಲ್ಲಿ 220 ದಿನಗಳಿಗೆ ಕಾರ್ಯ ಸಂಚಿಕೆ ಮಾಡಲಾಗಿದೆ.