ಬೆಂಗಳೂರು: ಬಿಬಿಎಂಪಿ ಬೆಡ್ ಬ್ಲಾಕ್ ಪ್ರಕರಣದಲ್ಲಿ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸಬೇಕು ಹಾಗೂ ಹಣ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಪರೋಕ್ಷ ಉತ್ತೇಜನ ನೀಡುತ್ತಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಸಂಬಂಧ ಕಾಂಗ್ರೆಸ್ ಯುವ ಮುಖಂಡ ಮನೋಹರ್, ನಗರ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಶಾಸಕರ ಆಪ್ತ ಬಾಬು ಎಂಬವನ ಬಂಧನವಾಗಿದೆ. ಈತ ಬಿಜೆಪಿ ಕಾರ್ಯಕರ್ತೆ ನೇತ್ರಾವತಿ ಮೂಲಕ ಬೆಡ್ ಬ್ಲಾಕ್ ದಂಧೆಯಲ್ಲಿ ಭಾಗಿಯಾಗಿದ್ದ. ಪ್ರಕರಣದ ಹಿಂದೆ ಸತೀಶ್ ರೆಡ್ಡಿ ಪಾತ್ರವಿದೆ. ಹೀಗಾಗಿ ಕೂಡಲೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾನೂನು ಕ್ರಮಕ್ಕೆ ಆಗ್ರಹ ಸರ್ಕಾರಿ: ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊರತೆ ನಡುವೆಯೂ ಸಂಸದ ತೇಜಸ್ವಿ ಸೂರ್ಯ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ಪರೋಕ್ಷವಾಗಿ ಖಾಸಗಿ ಆಸ್ಪತ್ರೆಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ. ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗೆ ದುಬಾರಿ ದರ ವಸೂಲಿ ಮಾಡುತ್ತಿದೆ. ಇದಕ್ಕೆ ಪ್ರಚಾರದ ರಾಯಭಾರಿಯಂತೆ ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ.
ಆಸ್ಪತ್ರೆಗಳೊಂದಿಗೆ ಕೈ ಜೋಡಿಸಿರುವ ಸಂಸದರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಧಿಕ್ಕರಿಸಿದ್ದಾರೆ. ಅಲ್ಲದೇ ಖಾಸಗಿ ಆಸ್ಪತ್ರೆಗಳೊಂದಿಗೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.