ಬೆಂಗಳೂರು : ಬಿಡಿಎನಲ್ಲಿನ ಕೆಲವು ಭ್ರಷ್ಟಾಚಾರಗಳನ್ನು ತಡೆಯಲು ನನ್ನ ಕೈಯಲ್ಲೂ ಸಾಧ್ಯವಾಗಿಲ್ಲ. ಈಗ ಬಿಡಿಎ ಕೇಂದ್ರ ಕಚೇರಿ ಮೇಲೆ ಎಸಿಬಿ ನಡೆಸಿರುವ ದಾಳಿಯನ್ನು ಸ್ವಾಗತಿಸುತ್ತೇನೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಡಿಎ ಒಂದು ಕಾಲದಲ್ಲಿ ಜನಪರ, ಉತ್ತಮ ಸಂಸ್ಥೆ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರದ ಆರೋಪಗಳು ಕೇಳಿ ಬರುತ್ತಿವೆ. ನಾನು ಅಧಿಕಾರ ವಹಿಸಿಕೊಂಡು ಒಂದು ವರ್ಷ ಆಗಿದೆ. ಸ್ವಚ್ಛ ಬಿಡಿಎ ಮಾಡುವುದು ನನ್ನ ಗುರಿ, ಬಿಡಿಎನಲ್ಲಿ ದಾಖಲೆಗಳೇ ಮಾಯವಾಗುತ್ತವೆ.
ನಕಲಿ ದಾಖಲೆ ಕೊಟ್ಟು ನಿವೇಶನ ಪಡೆದವರಿದ್ದಾರೆ. ಏನೇ ಕ್ರಮ ತೆಗೆದುಕೊಂಡರೂ ಕೋರ್ಟ್ನಲ್ಲಿ ತಡೆ ತರುತ್ತಾರೆ. ಈಗ ಎಸಿಬಿ ನಡೆಸಿರುವ ದಾಳಿಯನ್ನು ನಾನು ಸ್ವಾಗತ ಮಾಡುತ್ತೇನೆ. ಕೆಲವು ಭ್ರಷ್ಟಾಚಾರಗಳನ್ನು ನಾನೂ ಕೂಡ ತಡೆಯಲು ಆಗಿಲ್ಲ ಎಂದರು.
ನಾನು ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ಮಾಡಿ ಸಿಕ್ಕಿಕೊಂಡವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಇದು ಸಾರ್ವಜನಿಕರ ಹಣಕಾಸು ವ್ಯವಹಾರ ನಡೆಯುವ ಸಂಸ್ಥೆ. ನಾನೂ ಸಹ ದೂರುಗಳನ್ನು ಎಸಿಬಿಗೆ ಕೊಟ್ಟಿದ್ದೇನೆ.
ನಿನ್ನೆಯ ದಾಳಿಗೆ ಸಾಕಷ್ಟು ದೂರುಗಳನ್ನು ಕೊಡಲಾಗಿತ್ತು. ನಾನೂ ಸಹ ಎಸಿಬಿ ಅಧಿಕಾರಿಗಳಿಗೆ ಕೆಲವು ದಾಖಲೆ ಕೊಡೋದಾಗಿ ತಿಳಿಸಿದ್ದೇನೆ. ಈಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ, ಎಸಿಬಿಗೆ ಕೊಡಬೇಕಾದ ಎಲ್ಲ ಸಹಕಾರ ಕೊಡುತ್ತೇವೆ ಎಂದರು.
ನಿನ್ನೆಯ ದಾಳಿಯಲ್ಲಿ ನಗದು ಹಣ ಸಿಕ್ಕಿಲ್ಲ ಅನ್ನಿಸುತ್ತದೆ. ನಿನ್ನೆ ಜನರು ಕಚೇರಿಗೆ ಬಂದಿದ್ದಾಗ ದಾಳಿ ಆಗಿದೆ. ಅದೇ ಬ್ರೋಕರ್‌ಗಳು ಇದ್ದಾಗ ದಾಳಿ ನಡೆಯಬೇಕಿತ್ತು, ಆಗ ಹಣ ಸಿಗುತ್ತಿತ್ತು. ಈ ದಾಳಿ ಪ್ರಕರಣ ಸಂಬಂಧ ನಾನೂ ಸಹ ಸಿಎಂಗೆ ವಿವರಣೆ ನೀಡಿದ್ದೇನೆ ಎಂದರು.
ಕಮಿಷನ್ ದಂಧೆ ಕುರಿತು ಪ್ರಧಾನಿಗಳಿಗೆ ದೂರು ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, ಕಮಿಷನ್ ದಂಧೆ ಶುರು ಮಾಡಿದ್ದೇ ಈ ಕಾಂಗ್ರೆಸ್‌ನವರು. ಅವರೇ ಬಹುಶಃ ಪ್ರಧಾನಿಗಳಿಗೆ ಪತ್ರ ಬರೆಸಿದ್ದಾರೆ. 20 ಪರ್ಸೆಂಟ್ ಫಲಾನುಭವಿಗಳಿಗೆ ಹೋಗುತ್ತಿತ್ತು.
ಇನ್ನೂ 80 ಪರ್ಸೆಂಟ್ ಏಜೆನ್ಸಿಗಳಿಗೆ ಹೋಗ್ತಿತ್ತು. ನಾವು ಬಂದು ಒಳ್ಳೆ ವ್ಯವಸ್ಥೆ ಮಾಡಿದ್ದೇವೆ. ಯಾವುದೇ ದಾಖಲೆ ಇಲ್ಲದೆ ಆರೋಪ ಸರಿಯಲ್ಲ. ದೂರಿಗೆ ತಕ್ಕಂತೆ ನಿಖರವಾದ ದಾಖಲೆ ಕೊಡಲಿ, ಸರ್ಕಾರ ಸೂಕ್ತ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.