ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಬಿಡಿಎ ಆಯುಕ್ತ ಎಂ.ಬಿ. ರಾಜೇಶ್ ಗೌಡ ಅವರನ್ನು ಎತ್ತಂಗಡಿ ಮಾಡಿದೆ. ಹಿರಿಯ ಐಎಎಸ್ ಅಧಿಕಾರಿ ಕುಮಾರ್ ನಾಯ್ಕ್ಗೆ ಬಿಡಿಎ ಆಯಕ್ತರಾಗಿ ಹೆಚ್ಚುವರಿ ಹೊಣೆ ನೀಡಿ ಆದೇಶ ಹೊರಡಿಸಿದೆ.
ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಆಯುಕ್ತ ಎಂ.ಬಿ.ರಾಜೇಶ್ ಗೌಡ ಅವರನ್ನು ವರ್ಗಾವಣೆ ಮಾಡಬೇಕೆಂದು ಗುರುವಾರ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಬಹುಜನರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದಕ್ಕೆ ಸುಪ್ರೀಂ ಕೋರ್ಟ್ ರಾಜೇಶ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಪರ್ಯಾಯ ನಿವೇಶನಗಳ ಹಂಚಿಕೆ ಮಾಡುವಂತಿಲ್ಲ. ನಾವು ನಿರ್ಬಂಧಿಸಿದ್ದರೂ ಹಂಚಿಕೆ ಮಾಡಿ ಆದೇಶವನ್ನು ಉಲ್ಲಂಘಿಸಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಕೋರ್ಟ್ ಚಾಟಿ ಬೀಸಿತ್ತು. ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಎಸ್.ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಅಧಿಕಾರಿಗಳಿಗೆ ಚಾಟಿ ಬೀಸಿತ್ತು.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್
2021ರ ಅಕ್ಟೋಬರ್ 29ರಂದು ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಗಳ ನಿವೇಶನಗಳನ್ನು ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಬಿಡಿಎ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ವರಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿತ್ತು.
ಸುಪ್ರೀಂ ಕೋರ್ಟ್ ಛೀಮಾರಿ ಬಳಿಕ ಇದೀಗ ರಾಜ್ಯ ಸರ್ಕಾರ ಬಿಡಿಎ ಆಯುಕ್ತ ರಾಜೇಶ್ ಗೌಡ ಅವರನ್ನು ಎತ್ತಂಗಡಿ ಮಾಡಿದೆ. ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ಕುಮಾರ್ ನಾಯ್ಕ್ಗೆ ಬಿಡಿಎ ಆಯುಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.
ಇದನ್ನೂ ಓದಿ: 100 ಕೋಟಿ ರೂ. ಹಗರಣ: ಬಿಡಿಎ ಜಾಗಕ್ಕೆ ಅಕ್ರಮವಾಗಿ ಬದಲಿ ಜಾಗ ಪಡೆದು ಮಾರಾಟ!