ಬೆಂಗಳೂರು: ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಮುಂದಾಗಿದೆ. ಕೃಷಿಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಬಜೆಟ್‌ನಲ್ಲಿ ಘೋಷಿಸಿದಂತೆ 'ರೈತ ಶಕ್ತಿ' ಯೋಜನೆಗೆ ಶೀಘ್ರವೇ ಸರ್ಕಾರ ಚಾಲನೆ ನೀಡಲಿದೆ.
ರೈತರ ಕೃಷಿ ಯಾಂತ್ರೀಕರಣವು ಡೀಸೆಲ್ ಇಂಧನದ ಮೇಲೆ ಬಹುತೇಕ ಅವಲಂಬಿತವಾಗಿದೆ. ಹೀಗಾಗಿ ರೈತರ ಮೇಲಿನ ಆರ್ಥಿಕ ಹೊರೆ ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬರುವ ಸೆಪ್ಟೆಂಬರ್‌ನಲ್ಲಿ 'ರೈತ ಶಕ್ತಿ ಯೋಜನೆಗೆ' ಚಾಲನೆ ಸಿಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ರೈತ ಶಕ್ತಿ ಯೋಜನೆ ಜಾರಿಯಾಗಲಿದೆ. ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಠ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್ಗೆ ಸಹಾಯಧನವನ್ನು ನೀಡಲು ರೈತ ಶಕ್ತಿ ಎಂಬ ಹೊಸ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.
ಫ್ರೂಟ್ಸ್ ಪೋರ್ಟಲ್ ಮೂಲಕ ನೋಂದಣಿ: ರಾಜ್ಯದ ರೈತರಿಗೆ ಕೃಷಿ ಇಲಾಖೆಯ ಎಲ್ಲಾ ಯೋಜನೆಗಳನ್ನು ಫ್ರೂಟ್ಸ್ ಪೋರ್ಟಲ್ (FRUITS PORTAL) ಮೂಲಕ ನೋಂದಣಿ ಗುರುತಿನ ಸಂಖ್ಯೆ ಬಳಸಿ, ಕಿಸಾನ್ ತಂತ್ರಾಂಶದ ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಫ್ರೂಟ್ಸ್ ಪೋರ್ಟಲ್‌ನಲ್ಲಿ ನೊಂದಣಿಗೊಂಡ ರಾಜ್ಯದ ಎಲ್ಲಾ ರೈತರಿಗೆ 'ರೈತ ಶಕ್ತಿ' ಯೋಜನೆಯನ್ನು ಸಹ ಕಿಸಾನ್ ತಂತ್ರಾಂಶ ಬಳಸಿಕೊಂಡು ನೇರ ವರ್ಗಾವಣೆ (DBT) ಮೂಲಕವೇ ಯೋಜನೆ ಅನುಷ್ಠಾನ ಮಾಡಲಾಗುವುದು.
ನಗದು ಯೋಜನೆಯ ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಣಿಗೊಂಡ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಈ ಯೋಜನೆಯು ಅರ್ಹತಾಧಾರಿತ ಯೋಜನೆಯಾಗಿರುವುದರಿಂದ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ದಾಖಲೆಗಳ ಪರಿಶೀಲನೆಯನ್ನು ಸರ್ಕಾರದ ಫ್ರೂಟ್ಸ್ ಪೋರ್ಟಲ್‌ನಲ್ಲಿ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಮಾಡಲಾಗುವುದು.
ಫ್ರೂಟ್ಸ್ ಪೋರ್ಟಲ್‌ನಲ್ಲಿ ನಮೂದಿಸಲಾದ ಹಿಡುವಳಿಯ ವಿಸ್ತೀರ್ಣದ ಆಧಾರದ ಮೇಲೆ ರೈತರಿಗೆ ಡೀಸೆಲ್ ಸಹಾಯಧನವನ್ನು ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುವುದು. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾವಣೆಗೊಂಡ ರೈತರು ಹೊಂದಿರುವ ಭೂ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಠ ಐದು ಎಕರೆಗೆ 1,250 ರೂ. ವರಗೆ ಡೀಸೆಲ್ ಸಹಾಯಧನವನ್ನು ಒದಗಿಸಲಾಗುವುದು.
ಅರ್ಹ ರೈತರಿಗೆ ಡೀಸಲ್ ಸಹಾಯಧನದ ಮೊತ್ತವನ್ನು ಸರ್ಕಾರದ DBT ಪೋರ್ಟಲ್ ಮೂಲಕ ಆಧಾರದ ಸೀಡೆಡ್ ಬ್ಯಾಂಕ್/ ಪೋಸ್ಟ್ ಆಫೀಸ್ ಖಾತೆಗೆ ವರ್ಷಕ್ಕೊಮ್ಮೆ ವರ್ಗಾಯಿಸಲಾಗುವುದು. ರೈತರು ನಿಯಮಾನುಸಾರ ಸೂಚಿಸಿದಂತೆ ಯೋಜನೆಯ ಅರ್ಹತಾಧಾರರಾಗಿ ಫಲಾನುಭವಿಗಳಾಗುವಂತೆ ಕೃಷಿ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಲವು ನೀರಾವರಿ ಯೋಜನೆಗಳಿಗೆ ಸಂಪುಟ ಸಭೆ ಅನುಮೋದನೆ