ಬೆಂಗಳೂರು: ಕೃಷಿ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿರದೇ ಕ್ಷೇತ್ರ ಸಂಚಾರ ಮಾಡಿ ರೈತರಿಗೆ ಸಲಹೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ರೈತರು ತಮ್ಮ ಬೆಳೆಯನ್ನು ತಿಪ್ಪೆಗೆ, ರಸ್ತೆಗೆ ಎಸೆಯುವ ಕಾಲ ಹೋಗಿದೆ. ಈಗ ಅಂತಹ ಸನ್ನಿವೇಶ ಕಡಿಮೆಯಾಗಿದೆ. ಈಗ ತರಕಾರಿಗೆ ಸಾಕಷ್ಟು ಬೆಲೆ ಬರುತ್ತಿದೆ. ಹಾಪ್ ಕಾಮ್ಸ್ ಮೂಲಕ ಖರೀದಿ ನಡೆಯುತ್ತಿದೆ. ಹಾಗಾಗಿ ಯಾರೂ ಬೆಳೆ ರಸ್ತೆಗೆ ಬಿಸಾಡಬಾರದು ಎಂದು ಮನವಿ ಮಾಡಿದರು. ರಾಜ್ಯಮಟ್ಟದ ಅಗ್ರಿ ವಾರ್ ರೂಂ ರೀತಿಯಲ್ಲಿಯೇ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಮಟ್ಟದ ಅಗ್ರಿ ವಾರ್ ರೂಂ ಮಾಡಲಾಗಿದೆ. ಇದರಿಂದ ರೈತಗೆ ಸಹಾಯವಾಗಲಿದೆ. ಅಲ್ಲದೆ ನಾಲ್ಕು ಕೃಷಿ ವಿವಿಗಳಲ್ಲಿಯೂ ವಿಸಿಗಳ ನೇತೃತ್ವದಲ್ಲಿ ಅಗ್ರಿ ವಾರ್ ರೂಂ ಕೆಲಸ ಮಾಡುತ್ತಿವೆ ಎಂದರು. ಕೃಷಿ ವಿಶ್ವವಿದ್ಯಾಲಗಳ ಉಪಕುಲಪತಿಗಳ ಜೊತೆ ಸಭೆ ನಡೆಸಲಾಗಿದೆ. ಪ್ರತಿ ಜಿಲ್ಲೆಗೆ ಇಬ್ಬರು ಪ್ರೊಫೆಸರ್ಗಳನ್ನು ನೇಮಿಸಬೇಕು. ಸಹಾಯಕ ಪ್ರಾಧ್ಯಾಪಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಅವರೆಲ್ಲಾ ರೈತರಿಗೆ ನೆರವಾಗಬೇಕು ಎಂದರು.