ಬೆಂಗಳೂರು : ಚೀನಾದ ಶೇನ್ ಜೆನ್ ಮುನ್ಸಿಪಲ್ ಪೀಪಲ್ಸ್ ಗೌರ್ನಮೆಂಟ್ ಉಪಮೇಯರ್ ಯಾಂಗ್ ಹಾಂಗ್ ಮತ್ತು 7 ಸದ್ಯಸರ ತಂಡದ ಪ್ರತಿನಿಧಿಗಳು ಮಂಗಳವಾರ ಬಿಬಿಎಂಪಿಯ ನೂತನ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ಹಲವು ವಿಚಾರ ವಿನಿಮಯ ಮಾಡಿಕೊಂಡಿತು.
ಭೇಟಿ ವೇಳೆ, ಬಿಬಿಎಂಪಿ ಆಯುಕ್ತರು ಚೀನಾ ಪ್ರತಿನಿಧಿಗಳಿಗೆ ಬೆಂಗಳೂರು ನಗರದ ಬೆಳವಣಿಗೆ ಬಗ್ಗೆ ವಿವರಣೆ ನೀಡಿದ್ದಾರೆ. ಅದೇ ರೀತಿ, ಚೀನಾದೇಶದ ಶೆನ್ ಜೆನ್ ಮುನ್ಸಿಪಲ್ ನಗರದ ಬೆಳವಣಿಗೆ ಬಗ್ಗೆ ಚೀನಾ ಪ್ರತಿನಿಧಿಗಳಿಂದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ಪಡೆದುಕೊಂಡರು. ಬೆಂಗಳೂರು ನಗರಾಭಿವೃದ್ದಿ ಕುರಿತಂತೆ ತೆಗೆದುಕೊಳ್ಳಬೇಕಾದ ಯೋಜನೆಯ ಅನುಷ್ಠಾನದ ಕುರಿತೂ ಸಹ ಚರ್ಚೆ ನಡೆಯಿತು. ಸದರಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಹಂತ ದಿಂದ ಪಾಲಿಕೆ ವರೆಗೆ ಇರುವ ಹಂತಗಳ ಬಗ್ಗೆ ಚರ್ಚಿಸಿ ಕೈಗಾರಿಕಾ ವಲಯಗಳಿಗೆ ಮೂಲಭೂತ ಸೌಕರ್ಯ, ರಸ್ತೆ, ಸಾಫ್ಟ್‌ವೇರ್ ಪಾಕ್೯ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಚೀನಾ ದೇಶದಲ್ಲಿ ಅಳವಡಿಸಿಕೊಂಡ ಸ್ಮಾರ್ಟ್ ಸಿಟಿ ಯೋಜನೆಯ ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಪ್ರಸ್ತುತ ಚೀನಾ 5G ತಂತ್ರಜ್ಞಾನ ಅಳವಡಿಸಿಕೊಂಡು ಎಲ್ಲ ಗ್ರಾಹಕ ಸೇವೆಗಳನ್ನು ಆನ್ಲೈನ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಚೀನಾ ಪ್ರತಿನಿಧಿಗಳು ವಿವರಿಸಿದ್ದು, ಚೀನಾ ದೇಶದ ನಗರದ ಮಧ್ಯ ಭಾಗದಲ್ಲಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯ ಬಗ್ಗೆ ಘಟಕಗಳನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಹಾಗೂ ಇದರಿಂದಾಗಿ ಪರಿಸರದ ಮೇಲೆ ಮತ್ತು ವೈಯಕ್ತಿಕವಾಗಿ ಯಾವುದೇ ವ್ಯಕ್ತಿಯ ಮೇಲೆ ದುಷ್ಪರಿಣಾಮದ ಬಗ್ಗೆ ಚರ್ಚಿಸಿ, ಈ ಯೋಜನೆಯಿಂದ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಮೇಲು ಸೇತುವೆ, ರಸ್ತೆ ಅಭಿವೃದ್ದಿ ಯೋಜನೆಗಳು ಹಾಗೂ ಘನ ತ್ಯಾಜ್ಯ ಘಟಕಗಳು ಹಾಗೂ ನಿರ್ವಹಣೆ ಬಗ್ಗೆ ಚರ್ಚಿಸಿದ್ದಾರೆ. ಈ ಎಲ್ಲ ವಿಚಾರ ವಿನಿಮಯದ ನಂತರ ಒಡಂಬಡಿಕೆ ಬಗ್ಗೆ ಚರ್ಚಿಸಿ ಸದರಿ ಪ್ರಸ್ತಾವನೆ ಮುಂದಿನ ದಿನಗಳಲ್ಲಿ ಸಲ್ಲಿಸಿದ್ದಲ್ಲಿ, ಸರ್ಕಾರದ ಹಂತದಲ್ಲಿ ಅನುಮೋದನೆ ಪಡೆದು ಕಾರ್ಯ ಅಳವಡಿಸಿ ಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ, ಇದೇ ವೇಳೆ, ಚೀನಾ ದೇಶದ ಶೆನ್ ಜೆನ್ ನಗರದ ಉಪ ಮೇಯರ್ ಹಾಗೂ ಆಯುಕ್ತರು ಬಿಬಿಎಂಪಿಯ ಹಿರಿಯ ಅಧಿಕಾರಿಗಳ ತಂಡವನ್ನು ಚೀನಾ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಶ್ರೀ. ರಂದೀಪ್, ವಿಶೇಷ ಆಯುಕ್ತರು (ಘ.ತ್ಯಾ.ನಿ), ಶ್ರೀ. ರವಿಕುಮಾರ್ ಸುರ್ ಪುರ್, ವಿಶೇಷ ಆಯುಕ್ತರು (ಯೋಜನೆ ಮತ್ತು ಆರೋಗ್ಯ), ಶ್ರೀ. ಸರ್ಫಾಜ್ ಖಾನ್, ಜಂಟಿ ಆಯುಕ್ತರು (ಘ.ತ್ಯಾ.ನಿ) ಉಪಸ್ಥಿತರಿದ್ದರು.