ಬೆಂಗಳೂರು: ಆನ್‌ಲೈನ್ ಆಹಾರ ಮಾರಾಟಕ್ಕೆ ಬೀದಿ ಬದಿಯ ಆಹಾರ ಮಾರಾಟಗಾರರು ಕೂಡ ಪ್ರವೇಶಿಸುವ ಸಲುವಾಗಿ ಬಿಬಿಎಂಪಿ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ. ಇಷ್ಟು ದಿನ ಹೋಟೆಲ್ಗಳ ತಿಂಡಿ ತಿನಿಸುಗಳನ್ನು ಆ್ಯಪ್ ಮೂಲಕ ಡೆಲಿವರಿ ಪಡೆಯುತ್ತಿದ್ದ ಸಿಲಿಕಾನ್ ಸಿಟಿ ಜನರಿಗೆ ಬೀದಿ ಬದಿಯ ಆಹಾರವೂ ಸಿಗುವಂತಹ ಯೋಜನೆ ಇದಾಗಿದೆ.
ಅನೇಕ ಜನರಿಗೆ ಬೀದಿ ಬದಿಯಲ್ಲಿ ಸಿಗುವ ಆಹಾರ ತಿನ್ನಲು ಆಸೆಯಿದ್ದರೂ ಅಲ್ಲಿಗೆ ಹೋಗಿ ಆಹಾರ ಸೇವಿಸಲು ಮುಜುಗರ ಇರುತ್ತದೆ. ಅಂತಹವರು ಇನ್ನು ಮುಂದೆ ಸ್ವಿಗ್ಗಿ, ಜೊಮೊಟೊದಂತಹ ಆಹಾರ ಸರಬರಾಜು ಆ್ಯಪ್‌ಗಳ ಮೂಲಕ ಬೀದಿ ಬದಿ ಆಹಾರ ಮಾರಾಟಗಾರರಿಂದ ತಮಗೆ ಇಷ್ಟವಾದಂತಹ ಆಹಾರ ತರಿಸಿಕೊಳ್ಳಬಹುದಾಗಿದೆ. ಹೀಗಾಗಿ ಆಹಾರ ಸರಬರಾಜು ಆ್ಯಪ್‌ಗಳು ಮತ್ತು ಬೀದಿ ಬದಿ ಆಹಾರ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬಿಬಿಎಂಪಿ ಯೋಜಿಸಿದೆ.
ಬಿಬಿಎಂಪಿ ಪ್ಲಾನ್ ಏನು?: ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ಬೀದಿಬದಿ ಆಹಾರ ಮಾರಾಟಗಾರರಿಗೆ ಬಿಬಿಎಂಪಿ ತರಬೇತಿ ನೀಡಲಾಗುತ್ತಿದೆ. ಇದರಿಂದ ಬೀದಿ ಬದಿಯ ವ್ಯಾಪಾರಿಗಳು ತಮ್ಮ ಆಹಾರ ಪದಾರ್ಥಗಳನ್ನು ಮುಂದಿನ ದಿನಗಳಲ್ಲಿ ಆನ್‌ಲೈನ್ ಆ್ಯಪ್ ಮುಖಾಂತರ ಮಾರಾಟ ಮಾಡಬಹುದಾಗಿದೆ.
ಕೇಂದ್ರ ಸರ್ಕಾರದ ಈ ಯೋಜನೆಯನ್ನು ಬಳಸಿಕೊಂಡು ನಗರದಲ್ಲಿನ ಬೀದಿ ಬದಿಯ ಆಹಾರ ಮಾರಾಟಕ್ಕೆ ಉತ್ತೇಜನ ನೀಡುವ ಉದ್ದೇಶ ಪಾಲಿಕೆಯದ್ದಾಗಿದೆ. ಈ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ನಗರದಲ್ಲಿ ಬೀದಿ ಬದಿಯ ಆಹಾರ ಮಾರಾಟಗಾರರ ಲೆಕ್ಕ ಮಾಡಿ ಇವರಿಗೆ ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡುವುದು, ಗ್ರಾಹಕರಿಗೆ ಆಹಾರ ನೀಡಬೇಕಾದಾಗ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಜೊತೆಗೆ ಆಹಾರ ಮಾರಾಟಗಾರರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ ಎಂದು ಪಾಲಿಕೆಯ ವಿಶೇಷ ಆಯುಕ್ತ ರಾಮ್ಪ್ರಸಾದ್ ಮನೋಹರ್ ಹೇಳಿದರು.
7 ದಿನಗಳ ತರಬೇತಿ ಶಿಬಿರ: ಆಹಾರ ಮಾರಾಟಗಾರರಿಗೆ ಒಟ್ಟು 7 ದಿನಗಳ ತರಬೇತಿ ನೀಡಲಾಗುತ್ತಿದೆ. ಹೀಗೆ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಬಿಬಿಎಂಪಿ 3,425 ರೂ. ವ್ಯಯಿಸಲಿದೆ. ಆ ಹಣವನ್ನು ಕೇಂದ್ರ ಸರ್ಕಾರದ ಯೋಜನೆ ಅಡಿ ನೀಡಲಾಗಿರುವ ಅನುದಾನದಿಂದ ಪಡೆಯಲಾಗುತ್ತದೆ ಎಂದು ವಿಶೇಷ ಆಯುಕ್ತರು ತಿಳಿಸಿದರು.
ಆಗಸ್ಟ್ 15ರಿಂದ ಆರಂಭ: ಈ ಹೊಸ ಯೋಜನೆ ಭಾಗವಾಗಿ ಈಗಾಗಲೇ ಬಿಬಿಎಂಪಿಯಿಂದ ಬೀದಿಬದಿ ಆಹಾರ ಮಾರಾಟಗಾರರ ಸರ್ವೇ ನಡೆಸಲಾಗುತ್ತಿದೆ. ಸದ್ಯದ ಮಾಹಿತಿಯಂತೆ ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರು ಇದ್ದಾರೆ. ಆಹಾರವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಆಹಾರ ಸರಬರಾಜು ಆ್ಯಪ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.
ಜೊತೆಗೆ ವ್ಯಾಪಾರಿಗಳಿಗೆ ಪಾಲಿಕೆಯಿಂದ ಎರಡು ಲಕ್ಷ ಸಾಲ ನೀಡಲು ಸಹ ಮುಂದಾಗಿದ್ದೇವೆ. ಆಗಸ್ಟ್ 15ಕ್ಕೆ ಈ ಹೊಸ ಯೋಜನೆ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ರಾಮ್ಪ್ರಸಾದ್ ಮನೋಹರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಪರಿಸರ ರಾಯಭಾರಿಯಾಗಿ ಸಾಲು ಮರದ ತಿಮ್ಮಕ್ಕ ಆಯ್ಕೆ: ರಾಜ್ಯ ಸಚಿವ ಸಂಪುಟ ಸ್ಥಾನಮಾನ ನೀಡಿ ಆದೇಶ