ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ನರ್ಸರಿ ಶಾಲಾ ಕಟ್ಟಡವೊಂದು ಕುಸಿದುಬಿದ್ದಿರುವ ಘಟನೆ ಇಂದು ಮುಂಜಾನೆ ಶಿವಾಜಿನಗರದಲ್ಲಿ ನಡೆದಿದೆ. ಶಿವಾಜಿನಗರದ ಕುಕ್ಸ್ ರಸ್ತೆಯ ಬಿ ಕ್ರಾಸ್ನಲ್ಲಿರುವ ನರ್ಸರಿ ಶಾಲೆಯ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷದಡಿ ಕೆಲ ವಾಹನಗಳು ಸಿಲುಕಿ ಜಖಂಗೊಂಡಿವೆ. ಯಾರೂ ಇರದಿದ್ದಾಗ ಬೆಳಗಿನ ಜಾವ ಘಟನೆ ಸಂಭವಿಸಿದ ಪರಿಣಾಮ ಅದೃಷ್ಟವಶಾತ್ ಭಾರಿ ಅವಘಡವೊಂದು ತಪ್ಪಿದಂತಾಗಿದೆ.
ಬಿಬಿಎಂಪಿಗೆ ಸೇರಿದ ಇಂಗ್ಲಿಷ್ ನರ್ಸರಿ ಸ್ಕೂಲ್ ಕಟ್ಟಡ ಇದಾಗಿದ್ದು, ಸುಮಾರು 70 ರಿಂದ 80 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕಟ್ಟಡ ಶಿಥಿಲಾವಸ್ಥೆ ತಲುಪಿದ್ದರೂ ಸಹ ಅದೇ ಕಟ್ಟಡದಲ್ಲಿ ಶಾಲೆ ಮುಂದುವರೆಸಲಾಗಿತ್ತು. ಒಂದು ವೇಳೆ ಶಾಲಾ ಸಮಯದಲ್ಲಿ ಕುಟ್ಟಡ ಕುಸಿದು ಬಿದ್ದು ದೊಡ್ಡ ಅನಾಹುತ ಸಂಭವಿಸಿದ್ದರೆ ಅದಕ್ಕೆ ಹೊಣೆ ಯಾರು? ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸಿದ್ದಾರೆ.

ಬಿಬಿಎಂಪಿಗೆ ಸೇರಿದ ಇಂಗ್ಲಿಷ್ ಸ್ಕೂಲ್ ಇದಾಗಿದ್ದು, ಈ ಶಾಲೆಯಲ್ಲಿ ಒಟ್ಟು 90 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಆದರೆ, 90 ಮಕ್ಕಳ ಪೈಕಿ 75 ಮಕ್ಕಳು ಮಾತ್ರ ಪ್ರತಿದಿನ ಶಾಲೆಗೆ ಬರುತ್ತಿದ್ದರು ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಜೆಸಿಬಿ ಮೂಲಕ ಕಟ್ಟಡದ ಅವಶೇಷಗಳ ತೆರವು ಕಾರ್ಯ ನಡೆಸಲಾಗುತ್ತಿದೆ. ವಾಹನಗಳಿಗೆ ಹಾನಿಯಾಗಿದ್ದರಿಂದ ಅವುಗಳ ಮಾಲೀಕರು ಕಂಗಾಲಾಗಿದ್ದಾರೆ.
ಓದಿ: ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ: 19.2 ಮೀಟರ್ ಲಂಬವಾಗಿ ಕೊರೆಯುವಿಕೆ ಪೂರ್ಣ