ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕೊರೊನಾ ಸೋಂಕಿತರ ಸೇವೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿರುವ ಹಿನ್ನೆಲೆ ಮತಗಟ್ಟೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಹೋಂ ಐಸೋಲೇಷನ್ನಲ್ಲಿ ಇರುವವರ ಬಗ್ಗೆ ಎಚ್ಚರಿಕೆ ವಹಿಸಲು ಸಿಬ್ಬಂದಿಯ ಅವಶ್ಯಕತೆ ಇರುವ ಹಿನ್ನೆಲೆ ಮತಗಟ್ಟೆ ಸಿಬ್ಬಂದಿಯನ್ನು ಇವರ ಮೇಲ್ವಿಚಾರಣೆಗೆ ನೇಮಿಸಲಾಗುತ್ತಿದೆ. ಎ ಮತ್ತು ಬಿ ಶ್ರೇಣಿಯ ಅಧಿಕಾರಿಗಳನ್ನು ಕೋವಿಡ್-19 ಲಕ್ಷಣಗಳ ತಪಾಸಣೆ, ಪರೀಕ್ಷೆ, ಅನುಸರಣೆ, ಕ್ವಾರಂಟೈನ್ ಹಾಗೂ ಸಾಮಾಜಿಕ ಅಂತರ ಪಾಲನೆಗೆ ನಿಯೋಜಿಸಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ನಗರದ ಪ್ರತಿ ವಾರ್ಡ್‍ನಲ್ಲಿ 40 ಸಾವಿರದಿಂದ 60 ಸಾವಿರ ಜನ ಇದ್ದು, ಮತಗಟ್ಟೆಗಳಿಗೆ ಅನುಗುಣವಾಗಿ ವಿಪತ್ತು ನಿರ್ವಹಣಾ ವಾರ್ಡ್ ಸಮಿತಿಗಳನ್ನು ನೇಮಿಸಿಕೊಳ್ಳುವಂತೆ ಹಾಗೂ ಇದರಲ್ಲಿ ಸ್ವಯಂ ಸೇವಕರು, ವೈದ್ಯರು, ಪೊಲೀಸ್ ಸಿಬ್ಬಂದಿ, ಸ್ವಸಹಾಯ ಸಂಘದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಸಿಬ್ಬಂದಿ ಸೋಂಕು ತಗುಲಿದವರನ್ನು ಆಸ್ಪತ್ರೆಗೆ ಸೇರಿಸುವುದು ಹಾಗೂ ಕೊರೊನಾ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವುದರ ಜೊತೆಗೆ ಕಂಟೈನ್ಮೆಂಟ್ ಝೋನ್, ಬಫರ್ ವಲಯಗಳಲ್ಲಿ ಮನೆ ಮನೆಗೂ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದಾರೆ.