ಬೆಂಗಳೂರು: ತಪ್ಪು ಆಸ್ತಿ ಘೋಷಣೆ ಮಾಡಿದವರಿಂದ ತೆರಿಗೆಯ ಜೊತೆ ದಂಡ ಕೂಡಾ ವಸೂಲಿ ಮಾಡಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹೇಳಿದ್ದಾರೆ.
ಬಿಬಿಎಂಪಿ ಮಾಸಿಕ ಸಭೆ ನಂತರ ಮಾತನಾಡಿದ ಅವರು, ಆಸ್ತಿ ಘೋಷಣೆಯಲ್ಲಿ ತಪ್ಪು ಮಾಹಿತಿ ನೀಡಿದವರ ವಿರುದ್ಧ ಅಗತ್ಯ ಬಿದ್ದರೆ ಕಾನೂನು ಹೋರಾಟ ಕೂಡಾ ನಡೆಸಲಾಗುವುದು ಎಂದಿದ್ದಾರೆ.
ಬಿಬಿಎಂಪಿ ಮಾಸಿಕ ಸಭೆಯಲ್ಲಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗೆ ಪ್ರತಿ ಮನೆಯಿಂದ 200 ರೂಪಾಯಿ ಹಾಗೂ ವಾಣಿಜ್ಯ ಕಟ್ಟಗಳಿಗೆ ಪ್ರತ್ಯೇಕವಾಗಿ ಉಪ ಕರ ವಿಧಿಸುವ ನಿಯಮದ ಬಗ್ಗೆ ಚರ್ಚೆಯಾಯಿತು. ಲಾಕ್ಡೌನ್ ನಷ್ಟದ ಸಮಯದಲ್ಲಿ ಜನರಿಗೆ ಹೆಚ್ಚುವರಿ ಹೊರೆ ಮಾಡಬಾರದು ಎಂದು ಪಕ್ಷಾತೀತವಾಗಿ ಪಾಲಿಕೆ ಸದಸ್ಯರು ಪ್ರತಿಪಾದಿಸಿದರು. ಈ ನಿಯಮ ಜಾರಿಗೆ ತರಲು ಮೂರು ತಿಂಗಳ ಕಾಲಾವಧಿ ಇದ್ದು, ಉಪ ಕರದ ಮೊತ್ತವನ್ನು ಪುನರ್ ಪರಿಶೀಲನೆ ನಡೆಸಲು ಕೌನ್ಸಿಲ್ ತೀರ್ಮಾನಿಸಿದೆ. ಟೋಟಲ್ ಸ್ಟೇಷನ್ ಸರ್ವೇ ಮತ್ತೆ ಮುನ್ನೆಲೆಗೆ ಎರಡು ವರ್ಷದ ಹಿಂದೆ ನಡೆದ ಟೋಟಲ್ ಸ್ಟೇಷನ್ ಸರ್ವೇ ( ಸ್ವಯಂ ಘೋಷಿತ ಆಸ್ತಿಗಳ ಸರ್ವೇ) ಅಪೂರ್ಣವಾಗಿದ್ದು, ತಪ್ಪು ಆಸ್ತಿ ಘೋಷಿಸಿದ್ದವರಿಂದ 321 ಕೋಟಿ ರೂಪಾಯಿ ಸಂಗ್ರಹಿಸುವ ಬಗ್ಗೆ ಪಾಲಿಕೆ ವರದಿ ನೀಡಿದೆ.