ಆನೇಕಲ್: ಬೆಳ್ಳಂಬೆಳಗ್ಗೆ ಬೊಮ್ಮನಹಳ್ಳಿ ಬಿಬಿಎಂಪಿ ವಲಯದಲ್ಲಿ ಕಂಡು ಬಂದ ಸಮಸ್ಯೆಗಳ ಪ್ರದೇಶಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಹಾಗೂ ಅಧಿಕಾರಿಗಳ ತಂಡ ಬೈಕ್ನಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ಸಮಸ್ಯೆಗಳನ್ನು ಅರಿತು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಭೆ ನಡೆಸಿದ್ದಾರೆ.
ಇಂದು ಬೊಮ್ಮನಹಳ್ಳಿ ಬಿಬಿಎಂಪಿ ವಲಯದ ಬಿಳೇಕಹಳ್ಳಿ ,ಬೇಗೂರು, ಜೆಡಿ ಮರ, ಹೊಂಗಸಂದ್ರ ಸೇರಿದಂತೆ ಹಲವು ಕಡೆಗಳಿಗೆ ಮೇಯರ್ ಗೌತಮ್ ಕುಮಾರ್ ಹಾಗೂ ಅಧಿಕಾರಿಗಳ ತಂಡ ಸಮಸ್ಯೆಗಳಿರುವ ಪ್ರದೇಶಗಳ ವೀಕ್ಷಣೆ ಮಾಡಿದ್ದು, ಮೇಯರ್ ಗೌತಮ್ ಅವರಿಗೆ ಸ್ಥಳೀಯ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ , ಉಪ ಮೇಯರ್ ರಾಮ್ ಮೋಹನ್ ರಾಜ್ ಸಾಥ್ ನೀಡಿದರು.
ಇನ್ನು ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಹಾನಿಯಾದ ಪ್ರದೇಶಗಳು ಸೇರಿದಂತೆ ಮಳೆ ಬಂದಾಗ ಜಲಾವೃತವಾಗುವ ರಸ್ತೆ, ಗುಂಡಿಗಳು ,ಟ್ರಾಫಿಕ್ ಸಮಸ್ಯೆ ಹಾಗೂ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಬಗ್ಗೆ ಬೈಕ್ನಲ್ಲಿಯೇ ಅಧಿಕಾರಿಗಳ ಜೊತೆ ರೌಂಡ್ ಹಾಕಿ ಸಮಸ್ಯೆಗಳನ್ನು ಆಲಿಸಿದರು.
ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್ ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯ ಶಾಸಕರ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ರಾಜಕಾಲುವೆ ಒತ್ತುವರಿ ವಿಚಾರವಾಗಿ ಶಾಶ್ವತ ಪರಿಹಾರ ಮಾಡಬೇಕಾದರೆ ಸಮಯ ಬೇಕಾಗುತ್ತದೆ, ಸಭೆಯಲ್ಲಿ ಸಹ ಒಳ್ಳೆ ನಿರ್ಣಯಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇನೆಂದು ತಿಳಿಸಿದರು.