ಬೆಂಗಳೂರು: ಸಿರ್ಸಿ ಮೇಲ್ಸೇತುವೆ ರಸ್ತೆ ದುರಸ್ತಿ ಕಾಮಗಾರಿ ಒಂದು ಭಾಗ ಈಗಾಗಲೇ ಪೂರ್ಣಗೊಂಡಿದೆ. ಇನ್ನೊಂದು ಭಾಗದ ಕಾಮಗಾರಿ ನಡೆಸಲು ಇಂದು ಮೇಯರ್ ಗೌತಮ್ ಕುಮಾರ್ ಹಾಗೂ ಶಾಸಕ ಉದಯ್ ಗರುಡಾಚಾರ್, ಆಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ನಾಲ್ಕು ದಿನದೊಳಗೆ ಕಾಮಗಾರಿ ಆರಂಭವಾಗಲಿದ್ದು, ಕಾಮಗಾರಿ 30 ದಿನಗಳಲ್ಲಿ ಮುಗಿಸಬೇಕು. ಸಂಚಾರ ದಟ್ಟಣೆ ಆಗದಂತೆ, ಕ್ರಮವಹಿಸಬೇಕೆಂದು ಸಂಚಾರಿ ಪೊಲೀಸರಿಗೆ ಸೂಚಿಸಲಾಯಿತು. ಕಾಮಗಾರಿಯಿಂದ ಯಾರಿಗಾದರೂ ಸಮಸ್ಯೆ ಆದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ನಂತರ ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್-119 ವ್ಯಾಪ್ತಿಯ ಧರ್ಮರಾಯ ಸ್ವಾಮಿ ದೇವಸ್ಥಾನದ ಹತ್ತಿರ ಪಾಲಿಕೆಯ ಖಾಲಿ ಜಾಗವನ್ನು ಪರಿಶೀಲಿಸಿ ಆ ಜಾಗದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್(MLCP) ನಿರ್ಮಾಣದ ಬಗ್ಗೆ ಚಿಂತನೆ ನಡೆಸಲಾಗಿದೆ. ದಾಸಪ್ಪ ಆಸ್ಪತ್ರೆ ಪ್ರದೇಶವನ್ನು ತಪಾಸಣೆ ನಡೆಸಿ ಸರ್ಕಾರ ಹಾಗೂ ಶಾಸಕರ ಅನುದಾನದಲ್ಲಿ ಪುನರ್ ನವೀಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಪಿಪಿಪಿ ಮಾದರಿಯಲ್ಲಿ ಸೆಂಟ್ರಲ್ ಪಾರ್ಕಿಂಗ್ ಸರ್ವೀಸಸ್ ಸಂಸ್ಥೆ ನಗರದ 85 ಕಡೆ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸಲಿದ್ದು, ಕಸ್ತೂರ ಬಾ ರಸ್ತೆ ಸ್ಥಳ ಪರಿಶೀಲನೆ ಮಾಡಲಾಯಿತು. ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸುತ್ತಿರುವ ಸಂಸ್ಥೆಗೆ ಡಿಸೆಂಬರ್ 15 ರೊಳಗಾಗಿ ಪ್ರಾಯೋಗಿಕವಾಗಿ ಕಸ್ತೂರ ಬಾ ರಸ್ತೆಯಲ್ಲಿ ಪಾರ್ಕಿಂಗ್ ನಿಲುಗಡೆ ಪ್ರಾರಂಭಿಸುವಂತೆ ಆಯುಕ್ತರು ಸೂಚಿಸಿದರು.