ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಗೌತಮ್ ಕುಮಾರ್ ಸೇರಿ ಎಲ್ಲಾ ಸದಸ್ಯರ ಅಧಿಕಾರ ಅವಧಿ 2020ರ ಸೆಪ್ಟೆಂಬರ್ 11ಕ್ಕೆ ಕೊನೆಗೊಳ್ಳಲಿದೆ. ಆಗಸ್ಟ್ ತಿಂಗಳಿನ ಕೊನೆಯ ಮಾಸಿಕ ಸಭೆ ಮಂಗಳವಾರ ನಡೆಯಲಿದೆ.
ನಂತರ ನಡೆದರೂ ಕೇವಲ ಪರಸ್ಪರ ಅಭಿನಂದನಾ ಸಭೆಗೆ ಸೀಮಿತ ಆಗಬಹುದು. ಹೀಗಾಗಿ, ಕೊರೊನಾ ತುರ್ತುಪರಿಸ್ಥಿತಿಯ ಹಿನ್ನಲೆಯಲ್ಲಿ ಪಾಲಿಕೆ ಸದಸ್ಯರ ಅಧಿಕಾರ ಅವಧಿ ಆರು ತಿಂಗಳು ವಿಸ್ತರಿಸುವ ಬಗ್ಗೆ ಕಳೆದ ಮಾಸಿಕ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ಸಭೆಯಲ್ಲಿ ನಿರ್ಣಯ ಆಗುವ ಸಾಧ್ಯತೆ ಇದೆ.
ಘನತ್ಯಾಜ್ಯ ಸಂಬಂಧ ಗೃಹ ಜೈವಿಕ ತ್ಯಾಜ್ಯ ವಿಲೇವಾರಿ ಮಾಡುವ ಸಂಸ್ಥೆಗಳಿಂದ ಪಾಲಿಕೆಯ ಕೆಲ ವಲಯಗಳಲ್ಲಿ ಪ್ರಾಯೋಗಿಕವಾಗಿ ಗೃಹ ಜೈವಿಕ ಮತ್ತು ಸ್ಯಾನಿಟರಿ ತ್ಯಾಜ್ಯ ಸಾಗಣೆ ಹಾಗೂ ಸಂಸ್ಕರಣೆ ಮಾಡಲು, ಪ್ರತ್ಯೇಕ ಟೆಂಡರ್ ಆಹ್ವಾನಿಸಲಾಗಿದೆ. ಇವುಗಳನ್ನು ಒಣ ಕಸ ಕೇಂದ್ರಗಳಲ್ಲಿಯೇ ಪ್ರತ್ಯೇಕವಾಗಿ ಶೇಖರಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಇದಕ್ಕೆ ವಾರ್ಷಿಕ 389 ಕೋಟಿ ರೂ. ವೆಚ್ಚ ಆಗಲಿದ್ದು, ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.
2005- 2006ರಿಂದ 2015-16ರವರೆಗಿನ ಲೆಕ್ಕಪರಿಶೋಧನಾ ವರದಿಯನ್ನು ವಲಯ ಮಟ್ಟದಲ್ಲಿ ಪರಿಶೀಲಿಸಬೇಕಿದೆ. ಒಟ್ಟು 144 ಕಡತಗಳ 411.95 ಕೋಟಿ ರೂ. ಹಾಗೂ ವಸೂಲಾತಿ ಮೊತ್ತ 21,40,81,26 ರೂ.ಯಷ್ಟಿದೆ. ಈ ಬಗ್ಗೆಯೂ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆಯಾಗುವ ಸಾಧ್ಯತೆ ಇದೆ. ಉಳಿದಂತೆ ಕೊರೊನಾ ಕುರಿತು ಚರ್ಚೆ ನಡೆಯಲಿದೆ.