ಬೆಂಗಳೂರು : ಬಿಬಿಎಂಪಿ ಜಂಟಿ ಆಯುಕ್ತರೊಬ್ಬರಿಗೆ ಕುರ್ಚಿ ವ್ಯಾಮೋಹ ಶುರುವಾಗಿದ್ದು, ಸರ್ಕಾರ ಎರಡೆರಡು ಭಾರಿ ವರ್ಗಾವಣೆ ಮಾಡಿದ್ರೂ ತಾನು ಕೂತ ಸೀಟ್ನಿಂದ ಕದಲುತ್ತಿಲ್ಲ. ಅಷ್ಟೇ ಅಲ್ಲದೆ ಇವರ ವಿರುದ್ಧ ಪ್ರಭಾವ ಬಳಸಿ ಹುದ್ದೆಯಲ್ಲಿ ಮುಂದುವರೆದಿರುವ ಆರೋಪ ಕೇಳಿ ಬಂದಿದೆ.

ವರ್ಗಾವಣೆ ಆಗಿದ್ರೂ ಸೀಟ್ಗೆ ಅಂಟಿಕೊಂಡಿರೊ ಪಾಲಿಕೆ ಜಂಟಿ ಆಯುಕ್ತ :
ಬಿಬಿಎಂಪಿ ಭ್ರಷ್ಟ ಅಧಿಕಾರಿಗಳ ಪಾಲಿನ ಸ್ವರ್ಗ. ಇಲ್ಲಿಗೆ ಬೇಕಂತಲೆ ಅದೆಷ್ಟೋ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ. ಇಲ್ಲಿಗೆ ಬಂದವರು ಬೇರೆ ಕಡೆ ವರ್ಗಾವಣೆ ಆದರೂ ಹೋಗೋಕೆ ಹಿಂದೆ ಮುಂದೆ ನೋಡ್ತಾರೆ. ಇನ್ನು ಕೆಲವರು ಪ್ರಭಾವ ಬಳಸಿ ಇಲ್ಲೇ ಉಳಿದುಕೊಳ್ಳಲು ಶತ ಪ್ರಯತ್ನ ಮಾಡ್ತಾರೆ. ಅದರಂತೆ ಬಿಬಿಎಂಪಿ ಜಂಟಿ ಆಯುಕ್ತ ಎನ್.ಚಿದಾನಂದ ಅವರನ್ನು ಸರ್ಕಾರ ಜೂ.8ರಂದು ಕೃಷಿ ಇಲಾಖೆಗೆ ವರ್ಗಾವಣೆ ಮಾಡಿ ಆದೇಶಿಸಿ 6 ತಿಂಗಳು ಕಳೆದಿದೆ. ಹಿಗಿದ್ದರೂ ಸರ್ಕಾರ ಸೂಚಿಸಿರುವ ಕೃಷಿ ಇಲಾಖೆಯ ಉಪನಿರ್ದೇಶಕ ಸ್ಥಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರದ ಆದೇಶಕ್ಕೆ ಕಿಂಚಿತ್ತೂ ಕಿಮ್ಮತ್ತು ನೀಡದ ಕೆಎಎಸ್ ಅಧಿಕಾರಿ:
ಆಗಿನ ಮೇಯರ್ ಗೌತಮ್ ಕುಮಾರ್ ಜೂ.8ರಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರಿಗೆ ಪತ್ರ ಬರೆದು ಚಿದಾನಂದರನ್ನು ಸರ್ಕಾರದ ಆದೇಶದಂತೆ ಎತ್ತಂಗಡಿ ಮಾಡಲು ಸೂಚಿಸಿದ್ದಾರೆ. ಇದಕ್ಕೂ ಚಿದಾನಂದ್ ಬಗ್ಗಿಲ್ಲ. ಬಳಿಕ ನಗರಾಭಿವೃದ್ಧಿ ಇಲಾಖೆಯೇ ಆ.13ರಂದು ಮತ್ತೊಂದು ಪತ್ರ ಬರೆದು ಕೃಷಿ ಇಲಾಖೆಗೆ ಹಿಂದಿರುಗಿಸದ ಬಗ್ಗೆ ಮಾಹಿತಿ ಕೇಳಿದೆ. ಕೂಡಲೇ ಕೃಷಿ ಇಲಾಖೆಗೆ ಹಿಂದಿರುಗಿಸುವಂತೆ ಮತ್ತೆ ಸರ್ಕಾರ ಆದೇಶಿಸಿದೆ. ಇಷ್ಟಾದ್ರೂ ಜಂಟಿ ಆಯುಕ್ತ ಚಿದಾನಂದ ಕವಡೆ ಕಾಸಿನ ಕಿಮ್ಮತ್ತು ನೀಡ್ತಿಲ್ಲ, ಈ ಬಗ್ಗೆ ಸ್ಪಷ್ಟನೆ ಕೇಳಲು ಚಿದಾನಂದ್ಗೆ ಎಷ್ಟೇ ಬಾರಿ ಕರೆ ಮಾಡಿದ್ರೂ ಸ್ವೀಕರಿಸ್ತಿಲ್ಲ ಎನ್ನಲಾಗುತ್ತಿದೆ.

ಬಿಬಿಎಂಪಿ ಜಂಟಿ ಆಯುಕ್ತರಾಗಿ ನೇಮಕ ಆಗಬೇಕೆಂದರೆ ಕೆಎಎಸ್ ಅಥವಾ ಐಎಎಸ್ ಆಗಿರಬೇಕು. ಆದರೆ ಚಿದಾನಂದ ಕೆಎಎಸ್ ಮಾಡದೆ ಪ್ರಭಾವ ಬಳಸಿ ಜಂಟಿ ಆಯುಕ್ತ ಸ್ಥಾನದಲ್ಲಿ ಮುಂದುವರೆದಿರುವ ಆರೋಪವಿದೆ.