ಬೆಂಗಳೂರು: ರಾಜಧಾನಿಯ ನಾಗರಿಕರಿಗೆ ಹಲವು ವಸ್ತುಗಳ ಬೆಲೆ ಏರಿಕೆಯ ಬಿಸಿ ನಡುವೆ, ಮತ್ತೊಂದೆಡೆ ಹೊರೆ ಹೊರುವ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಶೀಘ್ರದಲ್ಲೇ ಪಾರ್ಕಿಂಗ್ ಪಾಲಿಸಿ 2.0 ಜಾರಿಗೆ ಸರ್ಕಾರ, ಪಾಲಿಕೆ ಮುಂದಾಗಿದೆ. ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಾರ್ಕಿಂಗ್ ಪಾಲಿಸಿ 2.0ಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಸ್ತೆಗಳಲ್ಲಿ ನಿಲ್ಲಿಸುವ ಪ್ರತಿಯೊಂದು ವಾಹನಗಳಿಗೆ ಹಣಪಾವತಿ ಮಾಡಬೇಕಾಗಿದೆ. ಡಲ್ಫ್ ಸಂಸ್ಥೆಯು ಕಳೆದ 2 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯ ಪ್ರಮಾಣ ಹೆಚ್ಚಳ ಹಾಗೂ ಖಾಸಗಿ ವಾಹನಗಳ ನಿಯಂತ್ರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರಕ್ಕೆ ತನ್ನ ಸಮಗ್ರ ಅಧ್ಯಯನ ವರದಿಯನ್ನು ಸಲ್ಲಿಸಿತ್ತು.
ಸ್ಮಾರ್ಟ್ ಪಾರ್ಕಿಂಗ್ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ: ಈ ಕುರಿತು ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು, ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಮುಂದಿನ ವಾರದಿಂದ ಎಲ್ಲ ನಿಯಮಗಳನ್ನು ಏರಿಯಾವಾರು ಜಾರಿಗೆ ತರಲಾಗುತ್ತದೆ. ಎಲ್ಲಾ ವಾಹನಗಳ ನಿಲುಗಡೆಗೂ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಎಚ್ಚರ.. ಮನೆ ಮುಂದೆ ಬೇಕಾಬಿಟ್ಟಿ ವಾಹನ ಪಾರ್ಕ್ ಮಾಡಿದ್ರೆ ಬೆಲೆ ತೆರಬೇಕಾದಿತು!
ಶೀಘ್ರ ಟೆಂಡರ್: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಪಾಲಿಸಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಮಾರುಕಟ್ಟೆ ಪ್ರದೇಶ, ರಸ್ತೆಯ ಮಾದರಿ ಸೇರಿದಂತೆ ವಿವಿಧೆಡೆ ಪಾರ್ಕಿಂಗ್ಗೆ ವಿಭಿನ್ನ ದರವಿದೆ. ಶೀಘ್ರವೇ ಟೆಂಡರ್ ಕರೆದು, ಅನುಮತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕಾರುಗಳ ಗಾತ್ರದ ಅನುಗುಣವಾಗಿ ಪಾರ್ಕಿಂಗ್ ಶುಲ್ಕ: ಬಿಬಿಎಂಪಿಯಲ್ಲಿ ಜಾರಿಗೊಳ್ಳುತ್ತಿರುವಂತ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ರಸ್ತೆಗಳಲ್ಲಿ ನಿಲ್ಲಿಸುವಂತ ಸಣ್ಣ ಕಾರುಗಳಿಗೆ 1 ಸಾವಿರ ರೂ, ಮಧ್ಯಮ ಗಾತ್ರದ ಕಾರುಗಳಿಗೆ 3 ಸಾವಿರದಿಂದ 4 ಸಾವಿರ ರೂ. ದೊಡ್ಡ ಗಾತ್ರದ ಕ್ರೇಟಾ, ಫಾರ್ಚೂನರ್ ನಂತಹ ಕಾರುಗಳಿಗೆ 5 ಸಾವಿರ ರೂ. ಸೇರಿದಂತೆ ಸ್ಥಳಕ್ಕೆ ತಕ್ಕಂತೆ ನಿಲುಗಡೆ ದರವನ್ನು ವಿಧಿಸುವ ಚಿಂತನೆ ಇದೆ ಎಂದಿದ್ದಾರೆ.