ಬೆಂಗಳೂರು: ಲಾಕ್ಡೌನ್ ಎಫೆಕ್ಟ್ನಿಂದಾದ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪಾಲಿಕೆಯ ಜೆಡಿಎಸ್ ಸದಸ್ಯರು, ನಗರದ ಅಧ್ಯಕ್ಷರು ಹಾಗೂ ಮುಖಂಡರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.
ಜೆಪಿ ನಗರದ ತಮ್ಮ ನಿವಾಸದಿಂದ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಅವರಿಂದ ಮಾಹಿತಿ ಕಲೆಹಾಕಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಸ್ಥಿತಿ ಹೇಗಿದೆ, ರೇಷನ್ ಕಿಟ್ ಸಮರ್ಪಕವಾಗಿ ಹಂಚಿಕೆಯಾಗಿದೆಯಾ?. ಸ್ಯಾನಿಟೈಸರ್ ವ್ಯವಸ್ಥೆ, ಮೂಲಭೂತ ಸೌಕರ್ಯ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಕುರಿತು ಚರ್ಚಿಸಿದರು.
ಕೊರೊನಾ ಸಂಕಷ್ಟದ ಜೊತೆಗೆ ಬಿಬಿಎಂಪಿ ಚುನಾವಣೆ ಕಡೆಗೂ ಗಮನ ಹರಿಸಬೇಕು. ಮುಂದೆ ಯಾವಾಗ ಬೇಕಾದರೂ ಬಿಬಿಎಂಪಿ ಚುನಾವಣೆ ದಿನಾಂಕ ನಿಗದಿಯಾಗಬಹುದು. ಚುನಾವಣಾ ದೃಷ್ಟಿಯಿಂದ ಎಲ್ಲರೂ ಕ್ಷೇತ್ರ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಸೂಚಿಸಿದರು.
ಅಧಿಕಾರಿಗಳ ವೈಫಲ್ಯ, ಅಸಮರ್ಪಕ ಕಿಟ್ ಹಂಚಿಕೆ, ಆಹಾರ ಮತ್ತು ಹಾಲು ವಿತರಣೆಯಲ್ಲಿ ವೈಫಲ್ಯ, ಮೂಲಭೂತ ಸೌಲಭ್ಯಗಳ ವಿತರಣೆಯಲ್ಲಿ ಅಸಹಾಯಕತೆಯನ್ನ ಎತ್ತಿ ತೋರಿಸಿ. ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಜನರಿಗೆ ಸಂಕಷ್ಟದಲ್ಲಿ ನೆರವಾಗಬೇಕೆಂದು ಹೆಚ್ಡಿಕೆ ಬಿಬಿಎಂಪಿ ಚುನಾವಣೆಯ ಮುನ್ಸೂಚನೆ ಕೊಟ್ಟರು. ಇದೇ ವೇಳೆ ನಗರದ ಹಲವು ಜೆಡಿಎಸ್ ಮುಖಂಡರ ಜೊತೆಯೂ ವಿಡಿಯೋ ಸಂವಾದದ ಮೂಲಕ ಮಾಹಿತಿ ಪಡೆದುಕೊಂಡರು.