ಬೆಂಗಳೂರು: ನಗರದ ಕಂಟೇನ್ಮೆಂಟ್ ಪ್ರದೇಶಗಳಲ್ಲಿನ ಬಡವರಿಗೆ ಆಹಾರ ಕಿಟ್ ಪೂರೈಸುವಲ್ಲಿ ವಿಫಲವಾಗಿರುವ ಬಿಬಿಎಂಪಿಗೆ ಛೀಮಾರಿ ಹಾಕಿರುವ ಹೈಕೋರ್ಟ್, ಈ ಪ್ರದೇಶಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಜಾರಿ ಮಾಡಲು ಹಾಗೂ ಬಡವರಿಗೆ ಆಹಾರ ಪೂರೈಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಅವರನ್ನು ಮೇಲುಸ್ತುವಾರಿಯಾಗಿ ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಿದೆ.
ಲಾಕ್ಡೌನ್ನಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಪಿಐಎಲ್ಗಳನ್ನು ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಕಂಟೇನ್ಮೆಂಟ್ ವಲಯಗಳಲ್ಲಿ ಬಡವರನ್ನು, ನಿರ್ಗತಿಕರನ್ನು ಗುರುತಿಸಿ ಅವರಿಗೆ ಆಹಾರ ಪೂರೈಸುವ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಉಸ್ತುವಾರಿಯನ್ನು ಜಿ. ಕುಮಾರ್ ನಾಯಕ್ ಅವರಿಗೆ ನೀಡಿ ಸರ್ಕಾರ ಆದೇಶ ಹೊರಡಿಸಬೇಕು. ಉಸ್ತುವಾರಿಯಾದ ಬಳಿಕ ನಾಯಕ್ ಅವರು, ಬಿಬಿಎಂಪಿ ಆಯುಕ್ತರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವರದಿಯನ್ನು ಜುಲೈ 24ಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ವಿಚಾರಣೆ ವೇಳೆ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿರುವ ಪೀಠ, ನಗರದಲ್ಲಿ 5,598 ಕಂಟೇನ್ಮೆಂಟ್ ವಲಯಗಳಿದ್ದು, ಇಲ್ಲೆಲ್ಲಾ ಅಗತ್ಯವಿರುವವರಿಗೆ ಆಹಾರ ಪೂರೈಸಬೇಕೆಂದು ಮಾರ್ಗಸೂಚಿ ಹೇಳುತ್ತದೆ. ಆದರೆ, ಬಿಬಿಎಂಪಿ ಅವಶ್ಯಕತೆ ಇರುವವರನ್ನೇ ಗುರುತಿಸಿಲ್ಲ. ಹಾಗಿದ್ದೂ 25 ಸಾವಿರ ರೇಷನ್ ಕಿಟ್ಗಳನ್ನು ವಿತರಿಸುವುದಾಗಿ ಹೇಳುತ್ತಿದೆ. ರಾಜ್ಯದಲ್ಲಿ ನಿತ್ಯವೂ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಬಿಬಿಎಂಪಿಗೆ ಕಾರ್ಯಭಾರ ಹೆಚ್ಚಾಗಿರುವುದು ನಿಜ. ಆದರೆ, ಪಾಲಿಕೆಗೆ ಕಾರ್ಯವಿಧಾನವೇ ತಿಳಿದಿಲ್ಲ. ಕೋರ್ಟ್ ಆದೇಶಗಳನ್ನೂ ಪಾಲಿಸುತ್ತಿಲ್ಲ. ಹೀಗಾಗಿ ಕೋರ್ಟ್, ಪಾಲಿಕೆಗೆ ಆಡಳಿತಾಧಿಕಾರಿ ನೇಮಿಸಲು ಮತ್ತು ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಲು ಯೋಚಿಸಿತ್ತು. ಆದರೆ, ನಗರದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಇರುವುದರಿಂದ ಸುಮ್ಮನಾಗಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.