ಬೆಂಗಳೂರು : ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಪ್ರಣಾಳಿಕೆ ಸಮಿತಿ ಸಭೆ ನಡೆಯಿತು. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆದಿದ್ದು, ಈ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ಧತೆ ಹಾಗೂ ಪ್ರಣಾಳಿಕೆ ರಚನೆ ಸಂಬಂಧ ಸುದೀರ್ಘ ಚರ್ಚಿಸಲಾಯಿತು.
ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಗೆ ಈಗಾಗಲೇ ಮೀಸಲಾತಿ ಪ್ರಕಟಿಸಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ ಇದಕ್ಕೆ ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಆಕ್ರೋಶ ಸಹ ವ್ಯಕ್ತಪಡಿಸಿದ್ದರು.
ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸಿರುವ ಸರ್ಕಾರ ಸಾಕಷ್ಟು ಅಕ್ರಮಗಳನ್ನು ಎಸಗುತ್ತಿದೆ. ತನ್ನ ಅಧಿಕಾರದ ಪ್ರಾಬಲ್ಯವನ್ನು ಬಳಸಿ ಗೆಲುವಿಗೆ ಕಾರ್ಯತಂತ್ರ ಹೆಣೆಯುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮಾದರಿಯಲ್ಲೇ ವಾಮ ಮಾರ್ಗದಲ್ಲಿ ಬಿಬಿಎಂಪಿ ಅಧಿಕಾರವನ್ನು ಹಿಡಿಯಲು ಯತ್ನಿಸುತ್ತಿದೆ. ಪ್ರಮುಖ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಇದನ್ನು ಸಮರ್ಥವಾಗಿ ಎದುರಿಸಬೇಕಿದೆ. ಬಿಜೆಪಿಯ ತಂತ್ರಗಾರಿಕೆಗೆ ಪ್ರತಿ ತಂತ್ರ ಹೆಣೆಯುವ ಕಾರ್ಯ ಆರಂಭಿಸಬೇಕಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.
ಬೆಂಗಳೂರು ನಗರದ ಮಾಜಿ ಮೇಯರ್ಗಳು, ಕಾರ್ಪೊರೇಟರ್ಗಳು ಹಾಗೂ ಹಿರಿಯ ಮುಖಂಡರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಯಾವುದೇ ಸಂದರ್ಭದಲ್ಲಿ ಬೇಕಾದರೂ ಬಿಬಿಎಂಪಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಅತಿ ಹೆಚ್ಚು ವಾರ್ಡುಗಳಲ್ಲಿ ಗೆಲ್ಲುವ ಮೂಲಕ ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು.
ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಮಹಿಳಾ ಮೀಸಲಾತಿಯನ್ನು ವಾರ್ಡ್ಗಳಿಗೆ ಹಂಚಿಕೆ ಮಾಡಿದೆ. ಇದಕ್ಕೆ ಎತ್ತಿದ್ದ ಆಕ್ಷೇಪಣೆಗೂ ಬೆಲೆ ಸಿಕ್ಕಿಲ್ಲ. ಚುನಾವಣೆ ಹೊಸ್ತಿಲಲ್ಲಿ ನಾವು ಬೇರೆಯ ಆರೋಪ ಪ್ರತ್ಯಾರೋಪ ಮಾಡುವ ಬದಲು ಸಮರ್ಥವಾಗಿ ಚುನಾವಣೆಯನ್ನು ಎದುರಿಸಲು ಸಜ್ಜಾಗಬೇಕು. ಬಿಜೆಪಿಯ ತಂತ್ರಗಾರಿಕೆ ಏನೇ ಇದ್ದರೂ ನಾವು ನಮ್ಮದೇ ಆದ ಸಾಮರ್ಥ್ಯದಿಂದ ಗೆದ್ದು ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬೇಕು ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಜೈಕುಮಾರ್, ವಿಷ್ಣುನಾಥನ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಮಾಜಿ ಸಚಿವ ಕೆ.ಜೆ. ಜಾರ್ಜ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಯಶಸ್ವಿಗೆ ಅಗತ್ಯ ಸಿದ್ಧತೆ ಪೂರ್ಣ: ಡಿಕೆಶಿ