ಬೆಂಗಳೂರು: ನಗರದ 8 ವಲಯಗಳಲ್ಲೂ ಕೋವಿಡ್ ಕಂಟ್ರೋಲ್ ರೂಂ ನಿರ್ಮಾಣ ಮಾಡಲಾಗಿದ್ದು, ಇವುಗಳ ಕಾರ್ಯನಿರ್ವಹಣೆ ಬಗ್ಗೆ ಆಯುಕ್ತ ಮಂಜುನಾಥ್ ಪ್ರಸಾದ್ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಆರಂಭದಲ್ಲಿ ಪಶ್ಚಿಮ ವಲಯದ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಬಳಿ ಮಾಹಿತಿ ಪಡೆದರು.
ಆ್ಯಂಬುಲೆನ್ಸ್ ಒದಗಿಸುವಿಕೆ, ಕೋವಿಡ್ ರೋಗಿಗಳ ಜೊತೆ ದೂರವಾಣಿ ಮೂಲಕ ಸಂಪರ್ಕ ಹೇಗಿದೆ ಎಂಬುದರ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದರು. ಅಗತ್ಯ ಸೌಲಭ್ಯಗಳು ಬೇಕಿದ್ದರೆ ಮಾಹಿತಿ ನೀಡುವಂತೆ ತಿಳಿಸಿದರು. ಇದಾದ ಬಳಿಕ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದರು.
ಮಧ್ಯಾಹ್ನದ ಬಳಿಕ ಬಿಐಇಸಿ ಕೋವಿಡ್ ಕೇರ್ ಸೆಂಟರ್ ಗೆ ಭೇಡಿ ನೀಡುವುದಾಗಿ ತಿಳಿಸಿದರು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕ್ವಾರಂಟೈನ್ ಅವಧಿ ಮುಗಿದ ಮೇಲೆ ಪರೀಕ್ಷೆ ನಡೆಸುವುದಿಲ್ಲ ಎಂಬ ದೂರು ಇದ್ದು, ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ವಿಧಾನಸಭಾ ಕ್ಷೇತ್ರಗಳ ಕಂಟ್ರೋಲ್ ರೂಂ ಜವಾಬ್ದಾರಿಗಳನ್ನು ವಾರ್ಡ್ ಮಟ್ಟಕ್ಕೆ ಹಂಚಿಕೆ ಮಾಡಲಾಗಿದೆ. ಕರೆ ಮಾಡಿ, ಪಾಸಿಟಿವ್ ರೋಗಿಗಳಲ್ಲಿ ಮಾಹಿತಿಗಳನ್ನು ಕಲೆ ಹಾಕುವ ಬದಲು ನೌಕರರೇ ಮನೆಗೆ ಹೋಗಿ ಮಾಹಿತಿ ಪಡೆಯಲು ಸೂಚಿಸಲಾಗಿದೆ.
ಈ ವೇಳೆ ಅವರು ಹೋಂ ಐಸೋಲೇಷನ್ ಗೆ ಬೇಕಾದ ವ್ಯವಸ್ಥೆ ಇರಲಿದೆಯಾ ಎಂಬ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಚಿಕ್ಕಪೇಟೆ ಅಂಗಡಿ ಮಳಿಗೆಗಳ ಆರಂಭದ ಕುರಿತು ಮಾತನಾಡಿದ ಆಯುಕ್ತರು, ಕೆಲವೆಡೆ ಒಂದು ದಿನ ಬಿಟ್ಟು, ಇನ್ನೊಂದು ದಿನ ಓಪನ್ ಮಾಡುವಂತೆ, ಅಥವಾ ಒಂದು ಅಂಗಡಿ ಓಪನ್ ಆದ್ರೆ ಅದರ ಅಕ್ಕಪಕ್ಕದ ಅಂಗಡಿಗಳನ್ನು ಬಂದ್ ಮಾಡುವ ಬಗ್ಗೆ ಸೂಚನೆ ನೀಡಲಾಗುತ್ತಿದೆ ಎಂದರು.