ಬೆಂಗಳೂರು : ನಗರದ ಹೃದಯ ಭಾಗದಲ್ಲಿರುವ ಚಿಕ್ಕಪೇಟೆ ಅಭಿವೃದ್ಧಿ ಮರೀಚಿಕೆಯಾಗಿದೆ. ಚಿಕ್ಕ ರಸ್ತೆಯಲ್ಲಿ ದ್ವಿಮುಖ ಸಂಚಾರವಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇನ್ನು ಫುಟ್ಪಾತ್ಗಳು ವ್ಯಾಪಾರಿಗಳಿಂದ ಒತ್ತುವರಿಯಾಗಿದ್ದು ಸಂಚರಿಸಲು ಅಸಾಧ್ಯವಾಗಿದೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್, ಚಿಕ್ಕಪೇಟೆ, ನಗರತ್ ಪೇಟೆ, ಅಕ್ಕಿಪೇಟೆ, ಬಳೇಪೇಟೆ, ಕುಂಬಾರ ಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಲ್ತಾನ್ ಪೇಟೆ ಮಾಮೂಲ್ ಪೇಟೆಗಳ ಸಂಚಾರ ದಟ್ಟಣೆ ನಿವಾರಿಸಲು ಏಕಮುಖ ಸಂಚಾರ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಕಸ ನಿರ್ವಹಣೆಗೆ ಪ್ರತ್ಯೇಕ ಸಭೆ
ಚಿಕ್ಕಪೇಟೆಯಲ್ಲಿ 90%ರಷ್ಟು ವಾಣಿಜ್ಯ ಉದ್ಯಮಗಳಿದ್ದು, ಹೆಚ್ಚು ಕಸ ಉತ್ಪತ್ತಿಯಾಗುತ್ತಿವೆ. ಬಟ್ಟೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಿಕ್ಕಸಿಕ್ಕ ಕಡೆಗಳಲ್ಲಿ ಎಸೆಯಲಾಗುತ್ತಿದೆ. ಈ ಕುರಿತು ಉದ್ಯಮಿಗಳು, ವರ್ತಕರ ಸಂಘಟನೆಗಳ ಜೊತೆ ಸಭೆ ನಡೆಸಿ, ತ್ಯಾಜ್ಯ ವಿಲೇವಾರಿ ಕುರಿತು ಸಲಹೆ ತೆಗೆದುಕೊಳ್ಳಲಾಗುವುದು ಮತ್ತು ಸಂಸದ ಪಿ.ಸಿ. ಮೋಹನ್ ಜೊತೆಗೂ ಚರ್ಚಿಸಿದ್ದು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದರು.
ರಾತ್ರಿ ವೇಳೆಯಲ್ಲಿ ಸ್ವಚ್ಚತೆ
ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವುದರಿಂದ ರಾತ್ರಿವೇಳೆ ತ್ಯಾಜ್ಯ ವಿಲೇವಾರಿಗೆ ಚಿಂತಿಸಲಾಗಿದೆ. ತ್ಯಾಜ್ಯ ಸಂಗ್ರಹಣೆ, ವಿಲೇವಾರಿಯನ್ನು ರಾತ್ರಿ ಹೊತ್ತಿನಲ್ಲಿ ಮಾಡುವ ಬಗ್ಗೆ ಸಂಘಟನೆಗಳ ಜೊತೆ ಸಭೆ ನಡೆಸಲಾಗುವುದು. ತ್ಯಾಜ್ಯ ನಿರ್ವಹಣೆ ಬೈಲಾ ಅಂತಿಮವಾದ ಬಳಿಕ, ಕಸ ನಿರ್ವಹಣೆಗೆ ಸಹಕರಿಸದ ವರ್ತಕರಿಗೆ ಹೆಚ್ಚು ಮೊತ್ತದ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.