ಬೆಂಗಳೂರು: ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ತ್ವರಿತ ಸಂಪರ್ಕ ಪತ್ತೆ ಹಚ್ಚುವಿಕೆ ಹಾಗೂ ಕೋವಿಡ್ ಸೋಂಕು ಪರೀಕ್ಷೆಗೆ ಟಾರ್ಗೆಟ್ ನೀಡಿ, ನಿಯಂತ್ರಣ ಕೆಲಸ ತ್ವರಿತಗೊಳಿಸಲು ಬಿಬಿಎಂಪಿ ಆಯುಕ್ತರು ಕೋವಿಡ್ ಹೆಚ್ಚು ಪತ್ತೆಯಾಗುತ್ತಿರುವ ವಲಯಗಳ ಕಂಟ್ರೋಲ್ ರೂಂಗಳ ಸಭೆ ನಡೆಸುತ್ತಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಪ್ರಧಾನಮಂತ್ರಿಗಳು ಹೇಳಿದಂತೆ ನಾವು ತ್ರಿ ಸೂತ್ರವನ್ನು ಅನುಸರಿಸುತ್ತಾ ಬಂದಿದ್ದೇವೆ. ಸಿಎಂ, ಪಿಎಂ ಸೂಚನೆಯಂತೆ ಕೋವಿಡ್ ಕೆಲಸ ಜಾರಿಯಲ್ಲಿದೆ. ಮಾರ್ಚ್ ತಿಂಗಳಲ್ಲಿ ಪಾಸಿಟಿವ್ ರೇಟ್ ಪ್ರಮಾಣ ಹೆಚ್ಚಾಗಿದೆ.
17 ದಿನಗಳಲ್ಲಿ ಪ್ರತಿ ನಿತ್ಯ 20 ಸಾವಿರದಿಂದ 40 ಸಾವಿರ ಟೆಸ್ಟ್ಗೆ ಟಾರ್ಗೆಟ್ ನೀಡಲಾಗಿದ್ದು, ಹೆಚ್ಚು ಹೆಚ್ಚು ಟೆಸ್ಟ್ ಮಾಡುತ್ತಿರುವುದರಿಂದ ಪಾಸಿಟಿವ್ ಕೇಸ್ಗಳ ಪ್ರಮಾಣ ಸಹ ಹೆಚ್ಚಾಗಿ ಸಿಗುತ್ತಿದೆ. ಪಾಸಿಟಿವ್ ಪ್ರಕರಣಗಳು ಬಂದ ಪ್ರದೇಶಗಳಲ್ಲಿ ಹೆಚ್ಚಿನ ಟೆಸ್ಟ್ ಮಾಡುವ ಮೂಲಕ ಸೋಂಕಿನ ಮೂಲ ಹಾಗೂ ಹರಡುವಿಕೆಯ ಪ್ರಮಾಣ ಗುರುತಿಸಿ ಸೂಕ್ತವಾದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಪೂರ್ವ ವಲಯದ ಕಂಟ್ರೋಲ್ ರೂಂ ಸಭೆಯ ವೇಳೆ ತಿಳಿಸಿದರು.
ಪೂರ್ವ ವಲಯದ 5 ವಾರ್ಡ್ಗಳು ಡೇಂಜರ್!
ದಿನವೊಂದಕ್ಕೆ 50 ಸಾವಿರ ಜನರ ಕೋವಿಡ್ ಸೋಂಕು ಪರೀಕ್ಷೆಗೆ ಹೆಚ್ಚಳ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಪೂರ್ವ ವಲಯದ 44 ವಾರ್ಡ್ಗಳ ಪೈಕಿ ಐದು ವಾರ್ಡ್ಗಳಾದ ಮಾರುತಿ ಸೇವಾ ನಗರ, ಬಾಣಸವಾಡಿ, ನ್ಯೂ ತಿಪ್ಪಸಂದ್ರ, ಕೋಣೇನ ಅಗ್ರಹಾರ, ಶಾಂತಲಾ ನಗರದಲ್ಲಿ ಹೆಚ್ಚು ಪ್ರಕರಣಗಳಯ ಕಂಡು ಬರುತ್ತಿದ್ದು, ಹೆಚ್ಚು ಟೆಸ್ಗೆ ಸೂಚಿಸಲಾಗಿದೆ. ಜೊತೆಗೆ ಹೆಚ್ಚು ಲಸಿಕೆ ನೀಡಲು ಸಹ ಸೂಚಿಸಲಾಗಿದೆ. ಪಾಸಿಟಿವ್ ಬಂದವರಿಗೆ ಬೇಕಾದ ಎಲ್ಲಾ ಸೌಲಭ್ಯ ಹಾಗೂ ಸಂಪರ್ಕಿತರನ್ನು ಐಸೋಲೇಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪಾಸಿಟಿವ್ ಪ್ರಮಾಣ 1.3%:
ನಗರದಲ್ಲಿ 1.3% ಪಾಸಿಟಿವಿಟಿ ಪ್ರಮಾಣವಿದ್ದು, ಮರಣ ಪ್ರಮಾಣ .62% ಇದೆ. ಇದು ನಿಯಂತ್ರಣದಲ್ಲಿರುವುದು ಸಮಾಧಾನಕರ ವಿಚಾರ. ಹೀಗಾಗಿ ಸಂಪರ್ಕಿತರ ಪತ್ತೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಹೆಚ್ಚು ಹರಡದಂತೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ಹೆಚ್ಚು ಟೆಸ್ಟ್ ಮಾಡುತ್ತಿರುವುದರಿಂದಲೇ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದರು.
ಪ್ರತಿ ದಿನ ತರಬೇತಿ:
ಸೋಂಕು ಪರೀಕ್ಷೆಗೆ ಹೋದಾಗ, ಯಾರ ಸ್ವ್ಯಾಬ್ ಕಲೆಕ್ಟ್ ಮಾಡಲಾಗುತ್ತದೋ ಅವರ ಸಂಪೂರ್ಣ ಮಾಹಿತಿ ಬರೆದುಕೊಳ್ಳಲಾಗ್ತಿದೆ. ಫೋನ್ ನಂಬರ್, ಪಿನ್ ಕೋಡ್, ವಿಳಾಸ ಎಲ್ಲವೂ ಸರಿಯಾಗಿದ್ದರೆ ಕೂಡಲೇ ಟ್ರೇಸ್ ಮಾಡಬಹುದಾಗಿದೆ. ಇಲ್ಲದಿದ್ದರೆ ಸಮಸ್ಯೆ ಆಗಲಿದೆ. ಹೀಗಾಗಿ 600 ಮೊಬೈಲ್ ಟೆಸ್ಟಿಂಗ್ ಟೀಂಗಳಿಗೆ ನಿರ್ದೇಶನ ನೀಡಲಾಗಿದ್ದು, ವಿಳಾಸ ಸರಿಯಾಗಿ ಪಡೆಯಲು ತಿಳಿಸಲಾಗಿದೆ.
ಜೊತೆಗೆ ಸೋಂಕು ಲಕ್ಷಣ ಇದ್ದವರೂ ತಕ್ಷಣ ಚೆಕ್ ಮಾಡಿಸಿ, ಟೆಸ್ಟ್ ರಿಪೋರ್ಟ್ ಬರುವವರೆಗೂ ಮನೆ ಬಿಟ್ಟು ಹೋಗದಂತೆ, ಓಡಾಡದಂತೆ ತಿಳಿಸಲಾಗಿದೆ. ಒಬ್ಬರು ಪಾಸಿಟಿವ್ ಆದರೆ, 15 ಜನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗ್ತಿದೆ. ಸದ್ಯ ನೀಡಿರುವ ಟಾರ್ಗೆಟ್ 15ರಿಂದ 20 ಜನರನ್ನು ಪತ್ತೆ ಹಚ್ಚುವುದು ಕಡ್ಡಾಯ ಎಂದರು.
ಸ್ಲಂ ಜನರಲ್ಲಿ ಕೋವಿಡ್ ಕಡಿಮೆ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ಲಂ ಜನರಲ್ಲಿ ಕೋವಿಡ್ ಪ್ರಕರಣ ಕಡಿಮೆ ಬರ್ತಿದೆ. ಇದಕ್ಕೆ ಕಾರಣ ಈ ಬಾರಿ ಟ್ರಾವೆಲ್ ಹಿಸ್ಟರಿಯಿಂದಲೇ ಹೆಚ್ಚು ಕೋವಿಡ್ ಬರುತ್ತಿದ್ದು, ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು, ಅಪಾರ್ಟ್ಮೆಂಟ್ ವಾಸಿಗಳು ಹಾಗೂ ಹಾಸ್ಟೆಲ್ಗಳಲ್ಲೇ ಹೆಚ್ಚು ಕೋವಿಡ್ ಕಂಡು ಬರುತ್ತಿದೆ ಎಂದರು.
ಹೋಟೆಲ್ ನೌಕರರಿಗೆ 15 ದಿನಕ್ಕೊಮ್ಮೆ ಟೆಸ್ಟಿಂಗ್ ಕಡ್ಡಾಯ:
ಹೋಟೆಲ್ಗಳ ಸಪ್ಲೈಯರ್, ಕ್ಯಾಶಿಯರ್, ಅಡುಗೆ ಮಾಡುವವರು 15 ದಿನಕ್ಕೊಮ್ಮೆ ಕೋವಿಡ್ ಟೆಸ್ಟ್ ಮಾಡುವುದು ಕಡ್ಡಾಯ. ಯಾಕೆಂದರೆ ಹೆಚ್ಚು ಜನರ ಸಂಪರ್ಕಕ್ಕೆ ಬರುವ ಹಿನ್ನೆಲೆ ಇದನ್ನು ಕಡ್ಡಾಯ ಮಾಡಲಾಗಿದೆ ಎಂದರು.
ಮೈಕ್ರೋ ಕಂಟೈನ್ಮೆಂಟ್ ಝೋನ್:
ನಗರದಲ್ಲಿ 5 ಪ್ರಕರಣಕ್ಕಿಂತ ಹೆಚ್ಚು ಒಂದೇ ಕಡೆ ಕಂಡು ಬಂದಿದ್ದರೆ ಅದನ್ನು ಮೈಕ್ರೋ ಕಂಟೈನ್ಮೆಂಟ್ ಮಾಡಲಾಗುತ್ತದೆ. ಸದ್ಯ ಹಜ್ ಭವನ, ಕೋರಮಂಗಲ, ಇಂಡೋರ್ ಸ್ಟೇಡಿಯಂ ಹಾಗೂ ಹೆಚ್ಎಎಲ್ ಓಲ್ಡ್ ಏರ್ಪೋರ್ಟ್ ಸೆಂಟರ್ನಲ್ಲಿ ಸಿಸಿಸಿ ಕೇಂದ್ರ ತೆರಯಲಾಗುತ್ತಿದೆ. ವೈದ್ಯರು ಹಾಗೂ ನರ್ಸ್ ಹುಡುಕಾಟದಲ್ಲಿದ್ದೇವೆ. ಯಾವುದೇ ಸಂದರ್ಭದಲ್ಲಿ ತೆರೆಯಲು ಸಜ್ಜಾಗುತ್ತಿದ್ದೇವೆ ಎಂದರು.
ಓದಿ: ಟೆಸ್ಟಿಂಗ್ ಹೆಚ್ಚಿಸಿ, ಜನರು ಆತಂಕಗೊಳ್ಳದಂತೆ ತಕ್ಷಣ ಕ್ರಮ ಕೈಗೊಳ್ಳಿ: ಸಿಎಂಗಳಿಗೆ ಮೋದಿ ಮಹತ್ವದ ಸೂಚನೆ