ಬೆಂಗಳೂರು: ನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುವಾಗುವಂತೆ ಪಾಲಿಕೆಯ 63 ಉಪ ವಿಭಾಗ ಕಚೇರಿಗಳಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಹಾಗೂ ಪಾಲಿಕೆ ವತಿಯಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಜೊತೆ ನಡೆದ ಜಂಟಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಪಾಲಿಕೆ ವತಿಯಿಂದ ಗಣೇಶ ನಿಮಜ್ಜನಕ್ಕೆ ನಗರದ ಕೇಂದ್ರ ಭಾಗದಲ್ಲಿರುವ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರ ಪ್ರಮುಖ ಕೆರೆ ಅಥವಾ ಕಲ್ಯಾಣಿಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ನಿರ್ದೇಶನ ನೀಡಿದರು.
ಕೆಲ ಪ್ರದೇಶಗಳಲ್ಲಿ ಕೆರೆಗಳು ವಸತಿ ಪ್ರದೇಶದಿಂದ ದೂರವಿರುವುದರಿಂದ ಸಾರ್ವಜನಿಕರು ಚಿಕ್ಕ-ಚಿಕ್ಕ ಮೂರ್ತಿಗಳನ್ನು ನಿಮಜ್ಜನ ಮಾಡುವ ಸಲುವಾಗಿ ಪ್ರತಿ ವಲಯಗಳ ಪ್ರಮುಖ ಸ್ಥಳ ಅಥವಾ ಜಂಕ್ಷನ್ ಮತ್ತು ಅವಶ್ಯಕತೆ ಇರುವ ಕಡೆ ವಾರ್ಡ್ವಾರು ತಾತ್ಕಾಲಿಕ ಸಂಚಾರಿ ನಿಮಜ್ಜನಾ ಘಟಕ (ಮೊಬೈಲ್ ಟ್ಯಾಂಕ್) ಗಳನ್ನು ಪ್ರತಿ ವರ್ಷದಂತೆ ವ್ಯವಸ್ಥೆ ಮಾಡಲು ಹೇಳಿದರು. ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ಗುರುತಿಸಿರುವ ಕೆರೆಗಳ ಸುತ್ತಮುತ್ತ ಹಾಗೂ ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡಿಂಗ್ ಅಳವಡಿಸಬೇಕು. ಎಲ್ಲ ನಿಮಜ್ಜನ ಕೇಂದ್ರಗಳಲ್ಲೂ ಪಾಳಿಯನುಸಾರ ನುರಿತ ಈಜುಗಾರರನ್ನು ಮತ್ತು ಅಗತ್ಯ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಆಯಾ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸುವ ಸಲುವಾಗಿ ಸಿಸಿಟಿವಿ, ವಿದ್ಯುತ್ ದ್ವೀಪಗಳ ಸೌಲಭ್ಯಗಳನ್ನು ತಪ್ಪದೇ ಅಳವಡಿಸಲು ಸೂಚಿಸಿದರು.
ನಿಮಜ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು(ಪೂಜಾ ಸಾಮಗ್ರಿಗಳಾದ ಹೂವು, ಬಾಳೆಯ ಕಂದು, ತಳಿರು ತೋರಣ, ಮತ್ತಿತರ ತ್ಯಾಜ್ಯ ವಸ್ತುಗಳನ್ನು) ಸಂಗ್ರಹಿಸಿ ನಿಗದಿತ ಕಂಟೈನರ್‌ಗಳ ಮೂಲಕ ತಕ್ಷಣವೇ ತೆರವುಗೊಳಿಸಲು ಅಗತ್ಯ ಸ್ವಚ್ಛತಾ ಸಿಬ್ಬಂದಿ ಹಾಗೂ ಸಾಗಣೆ ವಾಹನಗಳನ್ನು ಸಜ್ಜುಗೊಳಿಸಲು ತಿಳಿಸಿದರು. ಗಣೇಶ್ ಮೂರ್ತಿಗಳ ನಿಮಜ್ಜನಕ್ಕೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ದೋಣಿಗಳ ವ್ಯವಸ್ಥೆ, ನೀರೆತ್ತುವ ಪಂಪ್‌ಗಳ ವ್ಯವಸ್ಥೆ, ಕ್ರೇನ್‌ಗಳ ವ್ಯವಸ್ಥೆಗಳನ್ನು ಕೂಡ ಮಾಡಬೇಕು. ಜೊತೆಗೆ ಪೊಲೀಸ್ ಬಂದೋಬಸ್ತ್ ಮೂಲಕ ಸೂಕ್ತ ಏರ್ಪಾಡುಗಳನ್ನು ಮಾಡಿಕೊಳ್ಳಬೇಕು. ನಿಮಜ್ಜನಾ ಮೆರವಣಿಗೆ ವೇಳೆ ಪಟಾಕಿ, ಸಿಡಿ ಮದ್ದು ಸಿಡಿಸುವುದು ಹಾಗೂ ನಾಗರಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿಲಾಗಿದ್ದು, ದಂಡ ವಿಧಿಸುವ ಜೊತೆಗೆ ಸೂಕ್ತ ಕ್ರಮವಹಿಸಬೇಕು. ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ನಿಮಜ್ಜನೆ, ಸ್ವಚ್ಛತೆ ಕಾಪಾಡುವ ಹಾಗೂ ಇನ್ನಿತರ ಸೂಚನೆಗಳನ್ನು ಕಡ್ಡಾಯವಾಗಿ ಅನುಮತಿಯ ಆದೇಶ ಪತ್ರದಲ್ಲಿ ವಿವರಣೆ ಸಮೇತ ಇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಫೆಕ್ಸ್ ಅಥವಾ ಬ್ಯಾನರ್ ಅಳವಡಿಸುವುದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಕೋರಿದರು.
ಪರಿಸರ ಸ್ನೇಹಿ ಗಣೇಶ ಪೂಜಿಸಲು ಮನವಿ: ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳು ಕಲುಷಿತಗೊಳ್ಳದಂತೆ ತಡೆಗಟ್ಟಲು ಗಣೇಶ ನಿಮಜ್ಜನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ನಿಗದಿಪಡಿಸಿದ ಸ್ಥಳಗಳಲ್ಲೇ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಬೇಕು ಹಾಗೂ ಬಣ್ಣದ ಅಥವಾ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನಿಲ್ಲಿಸಿ ಪರಿಸರ ಸ್ನೇಹಿ ಮೂರ್ತಿಗಳನ್ನಿಟ್ಟು ಪೂಜಿಸಬೇಕು ಎಂದು ಸಾರ್ವಜನಿಕರಲ್ಲಿ ಮುಖ್ಯ ಆಯುಕ್ತರು ಮನವಿ ಮಾಡಿದರು.
ಸಭೆಯಲ್ಲಿ ಬಿಬಿಎಂಪಿಯ ಎಲ್ಲಾ ವಿಶೇಷ/ವಲಯ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಉಪ ಆಯುಕ್ತರು(ಆಡಳಿತ), ಅಗ್ನಿಶಾಮಕ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಹಾಗೂ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಶ್ರೀಕೃಷ್ಣ, ಗಣೇಶ ದೇವರ ಪೇಂಟಿಂಗ್ ಮಾಡಿ ಮನೆ ಮಾತಾದ ಮುಸ್ಲಿಂ ಮಹಿಳೆ !