ಬೆಂಗಳೂರು: ನಗರದ ಹಲವಾರು ಭಾಗಗಳಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದ್ದು, ಪಾಲಿಕೆ ಆಯುಕ್ತರು ಆ ಸ್ಥಳಗಳಿಗೆ ಭೇಟಿ ಮಾಡಿ ಪರಿಹಾರ ಕಾರ್ಯ ವೀಕ್ಷಿಸಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಘೋಷಿಸಿದ್ದಾರೆ.
ಹೊಸಕೆರೆಹಳ್ಳಿ ವಾರ್ಡ್ನಲ್ಲಿ ನಿನ್ನೆ ಕಡಿಮೆ ಅವಧಿಯಲ್ಲಿ 120 ರಿಂದ 125 ಮಿ.ಮೀ ಮಳೆಯಾಗಿದೆ. ರಾಜ ಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ರಸ್ತೆ ಮೇಲೆ ನೀರು ಹರಿದಿದೆ. ಸುತ್ತಲೂ ಬೆಟ್ಟದ ರೀತಿ ಇಳಿಜಾರು ಪ್ರದೇಶಗಳಿರುವ ಪರಿಣಾಮ ಹೆಚ್ಚು ಮಳೆಯಾದರೆ ನೀರಿನ ಮಟ್ಟ ಹೆಚ್ಚಿರುತ್ತದೆ.
ಇಲ್ಲಿರುವ ರಾಜಕಾಲುವೆಗಳನ್ನು 20 ವರ್ಷಗಳ ಹಿಂದೆ ನಿರ್ಮಿಸಿದ್ದು, ಅದನ್ನು ಪುನರ್ ಕಾಮಗಾರಿ ಕೈಗೆತ್ತಿಕೊಂಡು ಕಾಂಕ್ರೀಟ್ ಗೋಡೆ ನಿರ್ಮಿಸಲಾಗುತ್ತಿದೆ. ಹೆಚ್ಚು ಮಳೆಯಾದ ಪರಿಣಾಮ ಈ ಭಾಗದಲ್ಲಿ ಹೆಚ್ಚು ಸಮಸ್ಯೆ ಆಗಿದ್ದು, ರಾತ್ರಿ ಪಾಲಿಕೆ ಹಾಗೂ ಎನ್ ಆರ್ ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ಇರುವ ಸಮಸ್ಯೆ ಬಗೆಹರಿಸಿದ್ದು, ಇದರ ಜೊತೆಗೆ ಸ್ಥಳೀಯರಿಗೆ ರಾತ್ರಿ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ ಎರಡು ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಪೌರಕಾರ್ಮಿಕರು, ಗ್ಯಾಂಗ್ ಮ್ಯಾನ್ ಗಳು ರಸ್ತೆಯಲ್ಲಿ ತುಂಬಿರುವ ಹೂಳೂ ತೆರವು ಮಾಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಗೂ ಸ್ಯಾನಿಟೈಸ್ ಮಾಡಿದ್ದಾರೆ.
ಅನಾಹುತ ಆದ ಪ್ರದೇಶಕ್ಕೆ ಕಂದಾಯ ಸಚಿವರು ಹಾಗೂ ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸಿದ್ದು, ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಎಲ್ಲ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಎಲ್ಲಾದರೂ ಪ್ರವಾಹ ಉಂಟಾದಲ್ಲಿ ಅಧಿಕಾರಿಗಳ ತಂಡವು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.